ಮುಂಬೈ(ಮಹಾರಾಷ್ಟ್ರ) :ಬಾಲಿವುಡ್ ನಟ ಆರ್. ಮಾಧವನ್ ಹಾಗೂ ದಿಯಾ ಮಿರ್ಜಾ ಜೋಡಿಯಾಗಿ ನಟಿಸಿದ್ದ "ರೆಹನಾ ಹೈ ತೇರೆ ದಿಲ್ ಮೇ" (RHTDM) ಚಿತ್ರ ತೆರೆ ಕಂಡು ಇಂದಿಗೆ 20 ವರ್ಷಗಳು ಕಳೆದಿವೆ. ಚಿತ್ರತಂಡ 20ನೇ ವರ್ಷದ ವಾರ್ಷಿಕೋತ್ಸವ ಆಚರಿಸಿದೆ.
ಈ ಚಿತ್ರದ ಮೂಲಕ ಮಾಧವನ್ ಹಾಗೂ ದಿಯಾ ಮಿರ್ಜಾ ಜೋಡಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿತ್ತು. 2001ರಲ್ಲಿ ತೆರೆಕಂಡ ತಮಿಳು ಮಿನ್ನಾಲೆ ಚಿತ್ರದ ರಿಮೇಕ್ ಚಿತ್ರ ಇದಾಗಿತ್ತು. ಈ ಚಿತ್ರ ತನ್ನ ಸಂಗೀತದ ಮೂಲಕವೇ ಬಾಲಿವುಡ್ನಲ್ಲಿ ಹೊಸ ಸಂಚಲನ ಮೂಡಿಸಿತ್ತು. ದಿನ ಬೆಳಗಾಗುವುದೊರಳಗೆ ಮಾಧವನ್ ಹಾಗೂ ದಿಯಾ ಮಿರ್ಜಾ ಬಿಟೌನ್ನಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ್ದರು.
ಈ ಚಿತ್ರವನ್ನ ಗೌತಮ್ ಮೆನನ್ ನಿರ್ದೇಶನ ಮಾಡಿದ್ದರು. ವಶು ಭಗ್ನಾನಿ ಪೂಜಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಈ ಚಿತ್ರವನ್ನ ನಿರ್ಮಾಣ ಮಾಡಿತ್ತು. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದರೆ, ಗೀತ ರಚನೆಕಾರ ಸಮೀರ್ ಹಾಡುಗಳನ್ನು ಬರೆದಿದ್ದರು.