ಬಾಲಿವುಡ್ನಲ್ಲಿ ಡ್ರಗ್ಸ್ ಪ್ರಕರಣದ ವಿಚಾರಣೆ ಚುರುಕಿನಿಂದ ನಡೆಯುತ್ತಿದೆ. ಬಾಲಿವುಡ್ ಫ್ಯಾಷನ್ ಡಿಸೈನರ್ ಸಿಮೋನ್ ಖಂಬಟ್ಟಾ ಹಾಗೂ ನಟಿ ರಕುಲ್ ಪ್ರೀತ್ ಸಿಂಗ್ಗೆ ಕೂಡಾ ಎನ್ಸಿಬಿ ನೋಟೀಸ್ ನೀಡಿದೆ. ಇಂದು ಬೆಳಗ್ಗೆ ಖಂಬಟ್ಟಾ ಎನ್ಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.
ಬುಧವಾರ ರಕುಲ್ ಪ್ರೀತ್ ಸಿಂಗ್ಗೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ರಕುಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ತಮ್ಮ ಹೊಸ ವಿಳಾಸವನ್ನು ಅಧಿಕಾರಿಗಳಿಗೆ ನೀಡಿದ್ದು ಸಮನ್ಸ್ ಸ್ವೀಕರಿಸಿದ್ದಾರೆ ಎಂದು ಎನ್ಸಿಬಿ ಅಧಿಕಾರಿಗಳು ಹೇಳಿದ್ದಾರೆ. ರಕುಲ್ ಹಾಗೂ ಖಂಬಟ್ಟಾ ಹೊರತುಪಡಿಸಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಸೇರಿ ಇತರ ಬಾಲಿವುಡ್ ನಟಿಯರಿಗೆ ಡ್ರಗ್ಸ್ ಕುರಿತಂತೆ ವಿಚಾರಣೆಗೆ ಎನ್ಸಿಬಿ ಸಮನ್ಸ್ ಜಾರಿ ಮಾಡಿದೆ.
ಬುಧವಾರ ದೀಪಿಕಾ ಪಡುಕೋಣೆ ಜೊತೆಗೆ ಆಕೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ಗೆ ಕೂಡಾ ಸಮನ್ಸ್ ಜಾರಿ ಮಾಡಿದ್ದು ಶುಕ್ರವಾರ ಕರೀಷ್ಮಾ ಪ್ರಕಾಶ್ ಹಾಗೂ ಶನಿವಾರ ಶ್ರದ್ಧಾ ಕಪೂರ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಹಣದ ಅವ್ಯವಹಾರದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಎನ್ಡಿಪಿಎಸ್ ಆ್ಯಕ್ಟ್ ಅಡಿ ಎನ್ಸಿಬಿ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಸಹೋದರ ಶೌಯಿಕ್, ಸುಶಾಂತ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡ ಮೂವರೂ ಡ್ರಗ್ಸ್ ಬಗ್ಗೆ ಮೊಬೈಲ್ನಲ್ಲಿ ಚಾಟ್ ಮಾಡಿರುವುದು ತಿಳಿದು ಬಂದ ನಂತರ ಈ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಾಟ್ಗೆ ಸಂಬಂಧಿಸಿದಂತೆ ಎನ್ಸಿಬಿ ರಿಯಾ ಚಕ್ರವರ್ತಿ, ಶೌಯಿಕ್ ಸುಶಾಂತ್ ಮಾಜಿ ಮ್ಯಾನೇಜರ್ ಶ್ರುತಿ ಮೋದಿ, ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಸಿಇಒ ಧ್ರುವ್ ಚಿತ್ಗೋಪೇಕರ್, ಉಡ್ತಾ ಪಂಜಾಬ್ ನಿರ್ಮಾಪಕ ಮಧು ಮಂತೇನ ಹಾಗೂ ಇನ್ನಿತರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಡಿಪಿಎಸ್ ಆ್ಯಕ್ಟ್ ಅಡಿ ಎರಡು ಕೇಸ್ಗಳನ್ನು ದಾಖಲಿಸಿಕೊಂಡಿದ್ದು ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಇಬ್ಬರನ್ನೂ ಎರಡೂ ಕೇಸ್ಗಳ ಬಗ್ಗೆ ವಿಚಾರಣೆ ಮಾಡಲಾಗುವುದು ಎಂದು ಎನ್ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.