ಹೈದರಾಬಾದ್ :ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರ ನಿರ್ಮಿಸಿ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಹರಿಬಿಟ್ಟ ಪ್ರಕರಣದಲ್ಲಿ ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಫೆಬ್ರವರಿಯಲ್ಲೇ ಕೇಸ್ ದಾಖಲಾಗಿತ್ತು ಎಂದು ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಹೇಳಿದ್ದಾರೆ.
ರಾಜ್ ಕುಂದ್ರಾ ಬಂಧನವಾಗುತ್ತಿದ್ದಂತೆ, ಅವರು ಹಿಂದಿಯ ಪ್ರಸಿದ್ದ ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಾಜ್ಕುಂದ್ರಾ, ಪತ್ನಿ ಶಿಲ್ಪಾಶೆಟ್ಟಿ ಮತ್ತು ಅವರ ಸಹೋದರಿ ಶಮಿತಾ ಶೆಟ್ಟಿ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಕುಂದ್ರಾ ಅವರಿಗೆ, ನೀವು ಶಿಲ್ಪಾ ಜೊತೆ ಶಾಪಿಂಗ್ ಮಾಡ್ತೀರಿ, ತಿರುಗಾಡುತ್ತೀರಿ, ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತೀರಿ ಮತ್ತು ಸುಮ್ಮನೆ ಕೂತು ಫುಟ್ಬಾಲ್ ವೀಕ್ಷಿಸುತ್ತೀರಿ. ಇಷ್ಟೆಲ್ಲಾ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸುತ್ತಾರೆ.
ಈ ವೇಳೆ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಆ ಸಂದರ್ಭದಲ್ಲಿ ತಮಾಷೆಗೆ ಕೇಳಿದ ಪ್ರಶ್ನೆ, ಇದೀಗ ಕುಂದ್ರಾ ಹಣ ಗಳಿಸಲು ಅಡ್ಡದಾರಿ ಹಿಡಿದ ಆರೋಪದಲ್ಲಿ ಬಂಧನವಾಗುತ್ತಿದ್ದಂತೆ ವೈರಲ್ ಆಗುತ್ತಿದೆ.