ಮುಂಬೈ: ಓಂ ರೌತ್ ನಿರ್ದೇಶನದಲ್ಲಿ ಟಾಲಿವುಡ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸಲಿರುವ 'ಆದಿಪುರುಷ್' ಸಿನಿಮಾ 2022 ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಈ ಸಿನಿಮಾ ಚಿತ್ರೀಕರಣ ಇನ್ನೂ ಆರಂಭವಾಗದಿದ್ದರೂ ಚಿತ್ರತಂಡ ಈಗಾಗಲೇ ಬಿಡುಗಡೆ ದಿನಾಂಕ ನಿಗದಿಗೊಳಿಸಿದೆ.
ಚಿತ್ರೀಕರಣ ಆರಂಭಕ್ಕೂ ಮುನ್ನವೇ 'ಆದಿಪುರುಷ್' ಬಿಡುಗಡೆ ದಿನಾಂಕ ಫಿಕ್ಸ್ - Om Raut direction Adipurush
ರಾಮಾಯಣದ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ 'ಆದಿಪುರುಷ್' ಸಿನಿಮಾ ಚಿತ್ರೀಕರಣ 2021 ಜನವರಿಯಲ್ಲಿ ಆರಂಭವಾಗಲಿದೆ. ಆದರೆ ಈಗಾಗಲೇ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿದ್ದು 11 ಆಗಸ್ಟ್ 2022 ರಂದು ಸಿನಿಮಾ ತೆರೆ ಕಾಣಲಿದೆ ಎಂದು ನಿರ್ದೇಶಕ ಓಂರೌತ್ ಅಧಿಕೃತವಾಗಿ ತಿಳಿಸಿದ್ದಾರೆ.
ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಈ ಸಿನಿಮಾ, 3ಡಿ ಚಿತ್ರವಾಗಿದ್ದು ರಾಮಾಯಣದ ಕಥೆಯಿಂದ ಸ್ಪೂರ್ತಿ ಪಡೆದು ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಹಾಗೂ ಸೈಫ್ ಅಲಿ ಖಾನ್ ಲಂಕೇಶ್ ಪಾತ್ರದಲ್ಲಿ ನಟಿಸಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ 'ತಾನಾಜಿ' ಚಿತ್ರದ ನಂತರ ಓಂ ರೌತ್ ಈಗ 'ಆದಿಪುರುಷ್' ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಪ್ರಭಾಸ್ ಹಾಗೂ ಓಂರೌತ್ ಇಬ್ಬರೂ ಸಿನಿಮಾ ಬಿಡುಗಡೆ ದಿನಾಂಕದ ಪೋಸ್ಟರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಆದಿಪುರುಷ್' ಸಿನಿಮಾ 2021 ಜನವರಿಯಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಸಿನಿಮಾ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಲಿದ್ದು ತಮಿಳು, ಮಲಯಾಳಂ, ಕನ್ನಡ, ಇಂಗ್ಲೀಷ್ ಹಾಗೂ ಇತರ ವಿದೇಶಿ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುವುದು. ''ಈ ಚಿತ್ರಕ್ಕೆ ಪ್ರಭಾಸ್ ಅವರೇ ಪರಿಪೂರ್ಣ ವ್ಯಕ್ತಿ, ಅವರ ವ್ಯಕ್ತಿತ್ವ, ಆಕರ್ಷಕ ಕಣ್ಣುಗಳು, ಎತ್ತರ ಎಲ್ಲವೂ ಈ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದೆ. ಆದ್ದರಿಂದ ಈ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಲಾಯ್ತು. ಒಂದು ವೇಳೆ 'ಆದಿಪುರುಷ್' ಪಾತ್ರಕ್ಕೆ ಪ್ರಭಾಸ್ ದೊರೆಕದೆ ಇದ್ದಿದ್ದರೆ ನಾನು ಈ ಸಿನಿಮಾವನ್ನು ಮಾಡುತ್ತಲೇ ಇರಲಿಲ್ಲ'' ಎಂದು ಓಂರೌತ್ ಹೇಳಿಕೊಂಡಿದ್ದಾರೆ.