ಡಾರ್ಲಿಂಗ್ ಪ್ರಭಾಸ್ 'ಬಾಹುಬಲಿ' ಚಿತ್ರದ ನಂತರ ಮೊದಲ ಬಾರಿಗೆ 'ಸಾಹೋ' ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಅವರು 'ಆದಿಪುರುಷ್' ಎಂಬ ಮತ್ತೊಂದು ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದು 3ಡಿ ಚಿತ್ರ.
ಈ ಚಿತ್ರವನ್ನು ಓಂ ರೌತ್ ನಿರ್ದೇಶಿಸುತ್ತಿದ್ದು ಮೊನ್ನೆಯಷ್ಟೇ ಚಿತ್ರದ ಕಾನ್ಸೆಪ್ಟ್ ಪೋಸ್ಟರ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ ನೋಡುತ್ತಿದ್ದಂತೆ ಟಾಲಿವುಡ್ ಹಾಗೂ ಹಿಂದಿ ಪ್ರೇಕ್ಷಕರು ಪ್ರಭಾಸ್ ಪಾತ್ರದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿರಬಹುದಾ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಟಾಲಿವುಡ್ ನಿರ್ದೇಶಕ ಅಶ್ವಿನ್ ಬಾಬು ಮಾಡಿರುವ ಟ್ವೀಟ್ ಅಭಿಮಾನಿಗಳ ಈ ಕುತೂಹಲಕ್ಕೆ ಬ್ರೇಕ್ ನೀಡಿದೆ.
'ಪ್ರಭಾಸ್ ಅವರನ್ನು ರಾಮನ ಅವತಾರದಲ್ಲಿ ನೋಡಲು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಬೆಳ್ಳಿತೆರೆಯಲ್ಲಿ ಕೆಲವೇ ಕೆಲವು ನಟರು ಮಾತ್ರ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡಕ್ಕೆ ಶುಭವಾಗಲಿ' ಎಂದು ನಾಗ್ ಅಶ್ವಿನ್ ಶುಭ ಕೋರಿದ್ದಾರೆ. ಆದರೆ ಇದರ ಬಗ್ಗೆ 'ಆದಿ ಪುರುಷ್' ಚಿತ್ರತಂಡ ಅಧಿಕೃತವಾಗಿ ಯಾವ ಹೇಳಿಕೆ ಕೂಡಾ ನೀಡಿಲ್ಲ.
ಆದರೆ ಚಿತ್ರದ ಬಗ್ಗೆ ಮಾತನಾಡಿರುವ ಓಂ ರೌತ್, 'ಚಿತ್ರದ ಬಗ್ಗೆ ನನಗೆ ಇರುವ ಪರಿಕಲ್ಪನೆಯನ್ನು ಗುರುತಿಸಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ಪ್ರಭಾಸ್ ಅವರಿಗೆ ಧನ್ಯವಾದಗಳು, ನನ್ನ ಕನಸಿನ ಪ್ರಾಜೆಕ್ಟ್ಗೆ ಭೂಷಣ್ ಜಿ ಸಹಕಾರ ನೀಡಿದ್ದಾರೆ. ಹಿಂದೆಂದೂ ಪ್ರೇಕ್ಷಕರು ನೋಡಿರದ ಅದ್ಭುತ ಕಾನ್ಸೆಪ್ಟ್ ಬೆಳ್ಳಿತೆರೆ ಮೇಲೆ ಮೂಡಿಬರಲಿದೆ' ಎಂದು ಹೇಳಿದ್ದಾರೆ.
ಪ್ರಭಾಸ್ ಸದ್ಯಕ್ಕೆ ರಾಧಾಕೃಷ್ಣ ನಿರ್ದೇಶನದ 'ರಾಧೆ ಶ್ಯಾಮ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇದಾದ ನಂತರ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ. ಈ ಚಿತ್ರಗಳು ಪೂರ್ಣವಾದ ನಂತರವೇ 'ಆದಿ ಪುರುಷ್' ಅವತಾರವೆತ್ತಲಿದ್ದಾನೆ.