ಕೊರೊನಾ ಲಾಕ್ಡೌನ್ನಿಂದ ಬಹಳಷ್ಟು ಜನರು ತೊಂದರೆಗೆ ಸಿಲುಕಿದ್ದು ಕೆಲವರು ಇದ್ದ ಕೆಲಸವನ್ನು ಕೂಡಾ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಗೆ ರಸ್ತೆ ಬದಿಯಲ್ಲಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸುತ್ತಿದ್ದವರು ಕೂಡಾ ಏನಾದರೊಂದು ಕೆಲಸ ದೊರೆತರೆ ಸಾಕು ಎಂದು ಕಾಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಮೀರ್ ಖಾನ್ ಹಾಗೂ ರಾಣಿ ಮುಖರ್ಜಿ ಜೊತೆ 'ಗುಲಾಮ್' ಚಿತ್ರದಲ್ಲಿ ನಟಿಸಿದ್ದ ಜಾವೆದ್ ಹೈದರ್ ಮುಂಬೈನಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಜಾವೆದ್ ಟೊಮ್ಯಾಟೋ ಮಾರುತ್ತಾ ಚಿತ್ರವೊಂದರ ಹಾಡಿಗೆ ಧ್ವನಿಗೂಡಿಸಿರುವ ಟಿಕ್ಟಾಕ್ ವಿಡಿಯೋವೊಂದನ್ನು ಹಾಸ್ಯನಟಿ, ಮಾಜಿ ಬಿಗ್ಬಾಸ್ ಸ್ಪರ್ಧಿ ಡಾಲಿ ಬಿಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ನೆಟಿಜನ್ಸ್ ನಾನಾ ಕಮೆಂಟ್ಗಳನ್ನು ಮಾಡಿದ್ದರು. ಕೆಲವರು ಜಾವೆದ್ಗೆ ಇಂತ ಪರಿಸ್ಥಿತಿ ಬರಬಾರದಿತ್ತು ಎಂದು ಮರುಕ ಕೂಡಾ ವ್ಯಕ್ತಪಡಿಸಿದ್ದರು.