ನವದೆಹಲಿ:ನಟ ವಿಕ್ಕಿ ಕೌಶಾಲ್ ಮತ್ತು ಆಯುಷ್ಮಾನ್ ಖುರಾನಾ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಂದಾದುನ್ ಚಿತ್ರದ ಅಭಿನಯಕ್ಕಾಗಿ ಆಯುಷ್ಮಾನ್ ಕುರಾನಾ ಮತ್ತು ಉರಿ ಚಿತ್ರದ ಅಭಿನಯಕ್ಕಾಗಿ ವಿಕ್ಕಿ ಕೌಶಾಲ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ತೆಲುಗಿನ ಮಹಾನಟಿ ಚಿತ್ರದ ಅಭಿನಯಕ್ಕಾಗಿ ನಟಿ ಕೀರ್ತಿ ಸುರೇಶ್ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಅತ್ಯತ್ತಮ ಬಾಲನಟ ಪ್ರಶಸ್ತಿ ಪಡೆದುಕೊಂಡ ಕನ್ನಡಿಗ ಪಿ.ವಿ.ರೋಹಿತ್ (ಚಿತ್ರ ಕೃಪೆ ದೂರದರ್ಶನ) ಇನ್ನು ಕನ್ನಡದ ಒಂದಲ್ಲ ಎರಡಲ್ಲ ಚಿತ್ರದ ಅಭಿನಯಕ್ಕಾಗಿ ಪಿ.ವಿ.ರೋಹಿತ್ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮನ್ ಚಿತ್ರ ಉತ್ತಮ ಸಾಮಾಜಿಕ ಸಂದೇಶವುಳ್ಳ ಚಿತ್ರದ ವಿಭಾಗದಲ್ಲಿ ಪ್ರಶಸ್ತಿ ಪಡೆದಿಕೊಂಡಿದೆ.
ಇನ್ನು ಇದೇ ವೇಳೆ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಆದರೆ, ಅನಾರೋಗ್ಯ ಸಮಸ್ಯೆಯಿಂದ ಅಮಿತಾಭ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.