ಮುಂಬೈ:ಒಂದೆಡೆ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣದ ಚರ್ಚೆ ನಡೆಯುತ್ತಿದ್ದರೆ ಬಾಲಿವುಡ್ನಲ್ಲಿ ಕೂಡಾ ನಟಿ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಆರೋಪ ಕೇಳಿ ಬಂದಿದೆ. ಇಷ್ಟು ದಿನ ನೆಪೋಟಿಸಂ, ಮೂವಿ ಮಾಫಿಯಾ ವಿರುದ್ಧ ತಿರುಗಿಬಿದ್ದಿದ್ದ ಕಂಗನಾ ವಿರುದ್ಧ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಡ್ರಗ್ಸ್ ಸೇವನೆ ಆರೋಪ ಮಾಡಿದ್ದಾರೆ.
ಈ ನಡುವೆ ಮುಂಬೈ ಉಪನಗರದ ಬಾಂದ್ರಾ ಪಾಲಿಹಿಲ್ ಪ್ರದೇಶದಲ್ಲಿರುವ ಕಂಗನಾ ಅವರ ಕಚೇರಿಯನ್ನು ಅನಧಿಕೃತ ನಿರ್ಮಾಣ ಎಂದು ಆರೋಪಿಸಿ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸೀಲ್ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂಗನಾ ರಣಾವತ್, ನನ್ನ ವಿರುದ್ಧ ಬಿಎಂಸಿ ಕೇವಿಯಟ್ ಸಲ್ಲಿಸಿದೆ. ಒಂದು ವೇಳೆ ಕಚೇರಿಯನ್ನು ಅವರು ನಾಶ ಮಾಡಿದರೂ ಅದೇ ನನಗೆ ಸ್ಟ್ರೆಂತ್ ಆಗುತ್ತದೆ ಹೊರತು ಇದರಿಂದ ನಾನು ಎಂದಿಗೂ ಬಲಹೀನಳಾಗುವುದಿಲ್ಲ ಎಂದು ಹೇಳಿದ್ದಾರೆ.