ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ಮಂಗಲ್' ಚಿತ್ರದ ಎರಡನೇ ಅಧಿಕೃತ ಟ್ರೇಲರ್ ಇಂದು ಬಿಡುಗಡೆಗೊಂಡಿದೆ. ಇತ್ತೀಚೆಗೆ ನಭಕ್ಕೆ ಹಾರಿದ ಚಂದ್ರಯಾನ-2ರ ಕುರಿತಾಗಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
'ಮಿಷನ್ ಮಂಗಲ್', ಚಂದ್ರಯಾನ-2ನ್ನು ಸಾಧ್ಯವಾಗಿಸಿದ ಇಸ್ರೋ ವಿಜ್ಞಾನಿಗಳ ಪ್ರಯತ್ನ ಹಾಗೂ ಸ್ಪಿರಿಟ್ ಬಗ್ಗೆ ನಿರ್ಮಾಣವಾಗಿರೋ ಚಿತ್ರ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಗೆಗಿನ ಕಥೆ.
ಲಾಂಚ್ ಆಗಿರೋ ಹೊಸ ಟ್ರೇಲರ್ನಲ್ಲಿ, ಅಕ್ಷಯ್ ಕುಮಾರ್ ಉಪಗ್ರಹ ಉಡಾವಣೆಯ ವೈಫಲ್ಯ ಘೋಷಿಸುವುದರೊಂದಿಗೆ ಹೊಸ ಟ್ರೈಲರ್ ತೆರೆದುಕೊಳ್ಳುತ್ತದೆ. ಅಂತಹ ವೈಫಲ್ಯದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಲಡ್ಡು ತಿನ್ನುತ್ತಿರುವ ಹಾಸ್ಯಮಯ ಸನ್ನಿವೇಶವೂ ಟ್ರೇಲರ್ನಲ್ಲಿದೆ.
ಮಂಗಳ ಗ್ರಹಕ್ಕೆ ಹೋಗುವ ದಾರಿಯಲ್ಲಿನ ನಿರಂತರ ಹೋರಾಟಗಳನ್ನು ಟ್ರೈಲರ್ನಲ್ಲಿ ಮತ್ತಷ್ಟು ತೋರಿಸಲಾಗಿದೆ. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್, ಓರ್ವ ಆಶಾವಾದಿ ವಿಜ್ಞಾನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರೊಬ್ಬರೇ, ಚಂದ್ರಯಾನವನ್ನು ಭಾರತ ಸಾಧಿಸಿಯೇ ತೀರುತ್ತದೆ ಎಂಬ ಧನಾತ್ಮಕ ಯೋಚನೆಯಲ್ಲಿರುತ್ತಾರೆ. ಇನ್ನೊಂದು ಕಡೆ ತಮ್ಮ ಕಡೆಗುಂದದ ಸ್ಪಿರಿಟ್ನೊಂದಿಗೆ ಚಂದ್ರಯಾನವನ್ನು ಸಾಧ್ಯವಾಗಿಸಿದ ಕಡಿಮೆ ಅನುಭವದ ವಿಜ್ಞಾನಿಗಳ ತಂಡವನ್ನು ಅಕ್ಷಯ್ ಕುಮಾರ್ ಹಾಗೂ ವಿದ್ಯಾ ಬಾಲನ್ ಹೇಗೆ ಒಟ್ಟುಗೂಡಿಸಿ ಅವರಲ್ಲಿ ಉತ್ಸಾಹ ತುಂಬಿಸುತ್ತಾರೆ ಎಂಬುದನ್ನು ತೋರಿಸುತ್ತದೆ.
ಒಟ್ಟಾರೆ ಅಲ್ಲಲ್ಲಿ ನಗೆ ಚಟಾಕಿಗಳೊಂದಿಗೆ ಟ್ರೇಲರ್ ಇಸ್ರೋ ವಿಜ್ಞಾನಿಗಳ ನಿರಂತರ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಚಿತ್ರ ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದ್ದು, ಇಡೀ ದೇಶವೇ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದೆ.