ಎರ್ನಾಕುಲಂ :2018ರ ಫೆಬ್ರುವರಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕ ಮಧು ಎಂಬಾತನ ಕುಟುಂಬಕ್ಕೆ ಚಾರಿಟಿ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ನಟ ಮಮ್ಮುಟ್ಟಿ ಕಾನೂನು ನೆರವು ನೀಡಿದ್ದಾರೆ.
ಸಂತ್ರಸ್ತನ ಪರವಾಗಿ ಯಾವುದೇ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ತಿಳಿದ ನಂತರ ಮಧು ಅವರ ಕುಟುಂಬಕ್ಕೆ ಸಹಾಯ ಮಾಡಲು ನಟ ಮಮ್ಮುಟ್ಟಿ ಮುಂದೆ ಬಂದರು.
ಸಂತ್ರಸ್ತನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವಂತೆ ಮಮ್ಮುಟ್ಟಿ ಅವರಿಗೆ ಸೂಚಿಸಿದ್ದಾರೆ ಮತ್ತು ನಟ ಕೇರಳ ಕಾನೂನು ಸಚಿವ ಪಿ ರಾಜೀವ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂದು ನಟನ ಚಾರಿಟಿ ಕಾರ್ಯಗಳನ್ನು ಸಂಯೋಜಿಸುತ್ತಿರುವ ರಾಬರ್ಟ್ ಕುರಿಯಾಕೋಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮಧು ಅವರ ಕುಟುಂಬದ ಪರವಾಗಿ ಅತ್ಯುತ್ತಮ ಸರ್ಕಾರಿ ವಕೀಲರನ್ನು ಹಾಜರುಪಡಿಸಲು ಸಚಿವರು ಮುಂದಾಗಿದ್ದರು ಮತ್ತು ಸಂತ್ರಸ್ತನ ಕುಟುಂಬವು ಸರ್ಕಾರಿ ವಕೀಲರನ್ನು ಹೊಂದಲು ಇಚ್ಛೆ ವ್ಯಕ್ತಪಡಿಸಿದೆ ಎಂದು ರಾಬರ್ಟ್ ಕುರಿಯಾಕೋಸ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.