ಮುಂಬೈ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಹಣ ಸಂಗ್ರಹಿಸಲು ಒಗ್ಗೂಡಿದ ಭಾರತದ ಮತ್ತು ಜಗತ್ತಿನ 85ಕ್ಕೂ ಹೆಚ್ಚು ಪ್ರಸಿದ್ಧ ವ್ಯಕ್ತಿಗಳಲ್ಲಿ ಮಾಧುರಿ ದೀಕ್ಷಿತ್ ಕೂಡಾ ಒಬ್ಬರು.
ಎಡ್ ಶೀರನ್ ಅವರ ಜನಪ್ರಿಯ ಟ್ರ್ಯಾಕ್ 'ಪರ್ಫೆಕ್ಟ್'ಅನ್ನು ಮಾಧುಕಿ ದೀಕ್ಷಿತ್ ಹಾಡಿದ್ದು, ಪಿಯಾನೋದಲ್ಲಿ ಅವರ ಹಿರಿಯ ಮಗ ಆರಿನ್ ಸಾತ್ ನೀಡಿದ್ದಾರೆ.
ಶಾಸ್ತ್ರೀಯ ಗಾಯಕಿಯಾಗಿರುವ ತಾಯಿ ಸ್ನೇಲತಾ ದೀಕ್ಷಿತ್ ಅವರಿಂದ ಮಾಧುರಿ ಹಾಡುಗಾರಿಕೆ ಕಲಿತಿದ್ದಾರೆೆ. 2014ರಲ್ಲಿ ಬಿಡುಗಡೆಯಾದ ಗುಲಾಬ್ ಗ್ಯಾಂಗ್ ಸಿನಿಮಾದಲ್ಲಿ ರಂಗಿ ಸಾರಿ ಗುಲಾಬಿ ಚುನರಿಯಾ ಹಾಡನ್ನು ಮಾಧುರಿ ತನ್ನ ತಾಯಿಯೊಂದಿಗೆ ಹಾಡಿದ್ದರು. ಇದೀಗ ಎಡ್ ಶೀರನ್ ಅವರ ಸೂಪರ್ ಹಿಟ್ ರೊಮ್ಯಾಂಟಿಕ್ ಟ್ರ್ಯಾಕ್ 'ಪರ್ಫೆಕ್ಟ್'ಅನ್ನು ಹಾಡಿದ್ದು, ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಐ ಫಾರ್ ಇಂಡಿಯಾ ಕಾನ್ಸರ್ಟ್ಗಾಗಿ ಫೇಸ್‌ಬುಕ್ ಲೈವ್ನಲ್ಲಿ ಕಾಣಿಸಿಕೊಂಡ ಅಮ್ಮ ಮಗನ ಜೋಡಿ ನಾಲ್ಕುವರೆ ಗಂಟೆಗಳ ಕಾಲ ಡಿಜಿಟಲ್ ಕಾನ್ಸರ್ಟ್ ನೀಡಿದ್ದಾರೆ. ಆ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್ ಮತ್ತು ಜೋಯಾ ಅಖ್ತರ್ ಆಯೋಜಿಸಿದ್ದ ಡಿಜಿಟಲ್ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಅಮೀರ್ ಖಾನ್, ಆಯುಷ್ಮಾನ್ ಖುರಾನಾ, ಹೃತಿಕ್ ರೋಷನ್, ರಣವೀರ್ ಸಿಂಗ್, ಟೈಗರ್ ಶ್ರಾಫ್, ವಿಕ್ಕಿ ಕೌಶಲ್, ವಿದ್ಯಾ ಬಾಲನ್, ಕತ್ರಿನಾ ಕೈಫ್, ರಾಣಿ ಮುಖರ್ಜಿ, ಅರ್ಜುನ್ ಕಪೂರ್ ಮತ್ತು ದಿಲ್ಜಿತ್ ದೋಸಾನ್, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್, ಮತ್ತು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸೇರದಂತೆ 85 ಮಂದಿ ಭಾಗವಹಿಸಿದ್ದಾರೆ.
ಜ್ಯಾಕ್ ಬ್ಲ್ಯಾಕ್, ವಿಲ್ ಸ್ಮಿತ್, ರಸ್ಸೆಲ್ ಪೀಟರ್ಸ್, ಮಿಕ್ ಜಾಗರ್, ನಿಕ್ ಜೊನಸ್, ಜೋ ಜೊನಸ್ ಮತ್ತು ಸೋಫಿ ಟರ್ನರ್ ಸೇರಿದಂತೆ ಅಂತರಾಷ್ಟ್ರೀಯ ತಾರೆಯರು ಕೂಡಾ ಭಾಗವಹಿಸಿದ್ದಾರೆ.
ಇದರಿಂದ ಸಂಗ್ರಹವಾಗುವ ಆದಾಯವು ಕೋವಿಡ್-19 ಪರಿಹಾರ ನಿಧಿಗೆ ಹೋಗಲಿದೆ.