ಮುಂಬೈ: ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಿ ಉನ್ನತ ನ್ಯಾಯಪೀಠ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಸುಶಾಂತ್ ಸಹೋದರಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಿರಿ ಎಂಬ ಸಂದೇಶವೊಂದನ್ನು ಶೇರ್ ಮಾಡಿದ್ದಾರೆ.
ಸುಪ್ರೀಂ ತೀರ್ಪಿಗೂ ಮುನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸುಶಾಂತ್ ಸಹೋದರಿ ಶ್ವೇತಾ ಸಿಂಗ್, "ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಿರಿ" ಎಂದು ಕೈಮುಗಿಯುವ ಇಮೋಜಿಯೊಂದಿಗೆ ಇಂದು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಮಹಾಭಾರತದ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಕೌರವರೊಂದಿಗಿನ ಯುದ್ಧದ ಸಂದರ್ಭದಲ್ಲಿ ಕೃಷ್ಣ ಮತ್ತು ಅರ್ಜುನ ರಥದಲ್ಲಿರುವುದನ್ನು ಕಾಣಬಹುದು.
ಇನ್ನೊಂದೆಡೆ ಸುಶಾಂತ್ ಅಭಿಮಾನಿಗಳು ಕೂಡಾ ಶ್ವೇತಾ ಅವರನ್ನು ಬೆಂಬಲಿಸಿ, ಶುಭವಾಗಲಿ ಎಂದು ಹಾರೈಸಿದ್ದಾರೆ.
ಬಿಹಾರದ ಪಾಟ್ನಾದಿಂದ ಮುಂಬೈಗೆ ತನಿಖೆಯನ್ನು ವರ್ಗಾಯಿಸಲು ಬಿಹಾರ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ, ನಟನ ಸಾವಿಗೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಮತ್ತು ಇತರ ಕೆಲವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಸುಶಾಂತ್ ತಂದೆ ಕೆ.ಕೆ.ಸಿಂಗ್ ಅವರ ದೂರನ್ನಾಧರಿಸಿ, ಆತ್ಮಹತ್ಯೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದೇ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರಿದ್ದ ಏಕಸದಸ್ಯ ಪೀಠ ಇಂದು ತೀರ್ಪು ನೀಡಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದೆ. ಬಿಹಾರ ಸರ್ಕಾರ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಲು ಸಮರ್ಥವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.