ನಿನ್ನೆ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ಬಾಲಿವುಡ್ ಇಂದು ರಿಷಿ ಕಪೂರ್ ಅವರನ್ನು ಕಳೆದುಕೊಂಡಿದೆ. ರಿಷಿ ಅವರ ನಿಧನಕ್ಕೆ ಬಾಲಿವುಡ್ನ ಎಲ್ಲಾ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ಹಿರಿಯ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡಾ ರಿಷಿ ಕಪೂರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಲತಾ ಮಂಗೇಶ್ಕರ್ ತಮ್ಮ ಕೈಯ್ಯಲ್ಲಿ ಮಗುವೊಂದನ್ನು ಹಿಡಿದಿರುವ ಫೋಟೋವೊಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡು ರಿಷಿ ಕಪೂರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ 'ರಿಷಿ ಕಪೂರ್ ನಿಧನ ಬಾಲಿವುಡ್ ಇಂಡಸ್ಟ್ರಿಗೆ ಉಂಟಾದ ದೊಡ್ಡ ನಷ್ಟ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಲತಾ ಮಂಗೇಶ್ಕರ್ ಷೇರ್ ಮಾಡಿಕೊಂಡಿರುವುದು ರಿಷಿ ಕಪೂರ್ ಮಗುವಿದ್ದಾಗ ತೆಗೆದ ಪೋಟೋ.
'ಕೆಲವೇ ದಿನಗಳ ಹಿಂದಷ್ಟೇ ರಿಷಿ ಕಪೂರ್ ಅವರು ಈ ಪೋಟೋವನ್ನು ನನಗೆ ಕಳಿಸಿದ್ದರು. ಆ ದಿನಗಳೆಲ್ಲಾ ನನಗೆ ಇಂದಿಗೂ ನೆನಪಿದೆ. ನನ್ನ ಹಾಗೂ ಅವರ ನಡುವೆ ನಡೆದ ಸಂಭಾಷಣೆ ಕೂಡಾ ಇಂದಿಗೂ ನೆನಪಿದೆ. ಆದರೆ ನಾನು ಏನು ಹೇಳಲೂ ಸಾಧ್ಯವಿಲ್ಲ. ಈ ನೋವನ್ನು ಪದಗಳಿಂದ ಹೇಳಿಕೊಳ್ಳಲು ಸಾಧ್ಯವಿಲ್ಲ. ರಿಷಿ ಕಪೂರ್ ಅವರ ನಿಧನದ ಸುದ್ದಿ ತಿಳಿದು ನನಗೆ ಬಹಳ ದು:ಖವಾಯ್ತು. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವುಂಟಾಗಿದೆ. ಈ ನೋವನ್ನು ಮರೆಯುವುದು ನನಗೆ ಸಾಧ್ಯವಿಲ್ಲ. ದೇವರು ರಿಷಿ ಆತ್ಮಕ್ಕೆ ಶಾಂತಿ ಕರುಣಿಸಲಿ' ಎಂದು ಲತಾ ಮಂಗೇಶ್ಕರ್ ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ರಿಷಿ ಕಪೂರ್ ಸುಮಾರು 2 ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ನಿನ್ನೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದರಿಂದ ಅವರನ್ನು ಮುಂಬೈನ ಸರ್ ಹೆಚ್.ಎನ್ ರಿಲಾಯನ್ಸ್ ಫೌಂಡೇಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಿಷಿ ಕಪೂರ್ ಬೆಳಗ್ಗೆ 8.45 ಕ್ಕೆ ನಿಧನರಾಗಿದ್ದಾರೆ. ಹಿರಿಯ ನಟ ಅಮಿತಾಬ್ ಬಚ್ಚನ್ ರಿಷಿ ಕಪೂರ್ ನಿಧನರಾದ ಸುದ್ದಿಯನ್ನು ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದರು.
ಕಳೆದ ವರ್ಷ ಇಮ್ರಾನ್ ಹಶ್ಮಿ ಹಾಗೂ ಶೋಭಿತಾ ಧುಲಿಪಾಲ ಅವರೊಂದಿಗೆ 'ದಿ ಬಾಡಿ' ಚಿತ್ರದಲ್ಲಿ ಅವರು ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಬಾಬ್ಬಿ, ಚಾಂದಿನಿ, ಕರ್ಜ್ ಸೇರಿ ಬಹುತೇಕ ಚಿತ್ರಗಳ ಮೂಲಕ ಅವರುಬಾಲಿವುಡ್ನಲ್ಲಿ ಚಾಕೊಲೇಟ್ ಬಾಯ್ ಎಂದೇ ಹೆಸರಾಗಿದ್ದರು. ಬಹಳಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ರಿಷಿ ಕಪೂರ್ ಸ್ಟಾರ್ಡಮ್ ಗಿಟ್ಟಿಸಿಕೊಂಡಿದ್ದರು. ಪತ್ನಿ ನೀತು, ಮಕ್ಕಳಾದ ರಣಬೀರ್ ಕಪೂರ್, ರಿದ್ಧಿಮ ಹಾಗೂ ಅಭಿಮಾನಿಗಳನ್ನು ರಿಷಿ ಕಪೂರ್ ಅಗಲಿದ್ದಾರೆ.