ಮುಂಬೈ: ಈ ಕೊರೊನಾ ವೈರಸ್ ಬಂದಿದ್ದೇ ಬಂದಿದ್ದು, ಎಲ್ಲರ ಲೈಫ್ ಸ್ಟೈಲೇ ಚೇಂಜ್ ಆಗ್ಬಿಟ್ಟಿದೆ. ಬಡವ ಬಲ್ಲಿದ ಎನ್ನದೇ ಎಲ್ಲರೂ ಕೊರೊನಾ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ಸೋಷಿಯಲ್ ಡಿಸ್ಟನ್ಸಿಂಗ್ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿರ್ದೇಶನಗಳಿಂದಾಗಿ ಮನೆಯಲ್ಲೇ ಕಾಲ ಕಳೆಯಬೇಕಾಗಿದೆ. ಆದರೆ ಎಷ್ಟೊತ್ತು ಅಂತ ಮನೇಲಿ ಸುಮ್ಮನೆ ಇರೋಕಾಗುತ್ತೆ?
ಕೊನೆಪಕ್ಷ ಟೈಂ ಪಾಸ್ಗಾಗಿಯಾದರೂ ಏನಾದರೂ ಮಾಡುತ್ತಿರಬೇಕಾಗುತ್ತದೆ. ಈಗ ಇಂಥದ್ದೇ ಪರಿಸ್ಥಿತಿ ಸೆಲೆಬ್ರಿಟಿಗಳದ್ದೂ ಆಗಿದೆ. ಅದರಲ್ಲೂ ಬಾಲಿವುಡ್ ಸ್ಟಾರ್ಗಳು ತಾವು ಈ ಹಿಂದೆ ಮನೆಯಲ್ಲಿ ಇರುವಾಗ ಎಂದು ಮಾಡದ ಮನೆಗೆಲಸಗಳನ್ನು ಸಹ ಮಾಡುತ್ತಿದ್ದಾರೆ.
ಬಾಲಿವುಡ್ನ ಮೋಹಕ ತಾರೆ ಕತ್ರಿನಾ ಕೈಫ್ ಕೂಡ ಈಗ ಇಂಥದ್ದೇ ಒಂದು ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಕತ್ ವೈರಲ್ ಆಗಿದೆ. ಮನೆಗೆಲಸದವರು ಸಹ ಕೆಲಸಕ್ಕೆ ಬಾರದ್ದರಿಂದ ಕತ್ರಿನಾ ಕೈಫ್ ಸ್ವತಃ ಪಾತ್ರೆ ತೊಳೆಯುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
'ನಮ್ಮ ಮನೆಕೆಲಸದವಳು ಸಹ ಪ್ರತ್ಯೇಕವಾಸ ಬಯಸಿರುವುದರಿಂದ ಕೆಲಸಕ್ಕೆ ಬರುತ್ತಿಲ್ಲ. ನಾನು ಮತ್ತು ಇಜ್ಜಿ (ಇಸಾಬೆಲ್ಲಾ- ತಂಗಿ) ಸೇರಿಕೊಂಡು ಪಾತ್ರೆ ತೊಳೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ಬೇರೆಯವರಿಗೂ ಉಪಯೋಗವಾಗುವಂತೆ ಟ್ಯುಟೋರಿಯಲ್ ಒಂದನ್ನು ಮಾಡಬೇಕೆನಿಸುತ್ತಿದೆ ನನಗೆ..' ಎಂದು ಕತ್ರಿನಾ ಇನ್ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.