ಮಹಾರಾಷ್ಟ್ರ:ಯಾರ ವಿರೋಧವಿದ್ದರೂ ನಾನು ಮುಂಬೈಗೆ ಬರುತ್ತೇನೆ ಎಂದು ಹೇಳಿರುವ ನಟಿ ಕಂಗನಾ ರನೌತ್ರನ್ನು ಕರ್ಣಿ ಸೇನಾ ಸದಸ್ಯರು ವಿಮಾನ ನಿಲ್ದಾಣದಿಂದ ಮನೆಗೆ ಕರೆದೊಯ್ಯಲಿದ್ದಾರೆ.
ಇಂದು ಕಂಗನಾ ಹಿಮಾಚಲ ಪ್ರದೇಶದ ಮನಾಲಿಯಿಂದ ಹೊರಟು, ಮುಂಬೈ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಕಂಗನಾ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಈ ಹಿಂದೆ ಹೋಲಿಸಿದ್ದರು.
ಮುಂಬೈ ವಾಸಿಸಲು ಸುರಕ್ಷಿತವಾಗಿಲ್ಲ ಎಂದು ಹೇಳಿದ್ದ ಕಂಗನಾ ಮುಂಬೈ ಪೊಲೀಸರ ಕೆಲಸದ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು. ಕಂಗನಾ ಅವರ ಆಕ್ರಮಣಕಾರಿ ಟ್ವೀಟ್ ವಿರೋಧಿಸಿ, ಮಹಾರಾಷ್ಟ್ರದಲ್ಲಿ ಶಿವಸೇನೆ ವಿವಿಧ ಸ್ಥಳಗಳಲ್ಲಿ ಆಂದೋಲನ ನಡೆಸಿತ್ತು.
ಶಿವಸೇನೆಯ ಮಹಿಳಾ ಕಾರ್ಯಕರ್ತರು ಕಂಗನಾ ಬಾಯಿ ಮುರಿಯುತ್ತಾರೆ ಎಂದು ಶಿವಸೇನೆಯ ಶಾಸಕ ಪ್ರತಾಪ್ ಸರ್ನಾಯಕ್ ಎಚ್ಚರಿಸಿದ್ದರು. ಈ ಪ್ರಕರಣ ಈಗ ರಾಷ್ಟ್ರಮಟ್ಟಕ್ಕೆ ತಲುಪಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ಸರ್ನಾಯಕ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಇದೀಗ ಕರ್ಣಿ ಸೇನಾ ಕಂಗನಾ ರನೌತ್ ರಕ್ಷಣೆಗೆ ಬಂದಿದೆ. "ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮಣಿ ಕಂಗನಾರನ್ನು ರಕ್ಷಿಸುವ ಆದೇಶವನ್ನು ನಮಗೆ ನೀಡಿದ್ದಾರೆ" ಎಂದು ಮುಂಬೈ ಕರ್ಣಿ ಸೇನಾ ಅಧ್ಯಕ್ಷ ಜೀವನ್ ಸಿಂಗ್ ಸೋಲಂಕಿ ಹೇಳಿದ್ದಾರೆ.