ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಸಾವಿನ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕೆಲವರು ಆತ ಖಿನ್ನತೆಯಿಂದ ಬಳಲುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಮತ್ತೆ ಕೆಲವರು ಆತನನ್ನು ಕೆಲವರು ಉದ್ದೇಶಪೂರ್ವಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾರೆ ಎನ್ನುತ್ತಿದ್ದಾರೆ.
ನಟಿ ಕಂಗನಾ ರಣಾವತ್ ಕೂಡಾ ಸುಶಾಂತ್ ಅವರದ್ದು ಪೂರ್ವ ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು. ಇದೀಗ ಕಂಗನಾ ರಣಾವತ್ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. "ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಎಷ್ಟೋ ವಿಚಾರಗಳು ಹೊರಬರುತ್ತಿವೆ. ಚಿತ್ರರಂಗದ ಇತ್ತೀಚಿನ ಬೆಳವಣಿಗೆ ವಿಚಾರದಲ್ಲಿ ಸುಶಾಂತ್ ಸಿಂಗ್ ಬಹಳ ಚಿಂತೆ ಮಾಡುತ್ತಿದ್ದರು ಎಂದು ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ಹೇಳಿದ್ದಾರೆ. ಸುಶಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅಭಿಷೇಕ್ ಸಿಂಗ್ ಕೂಡಾ ಚಿತ್ರರಂಗದಲ್ಲಿ ನಡೆಯುವ ವಿಚಾರಗಳು ದುರ್ಬಲ ಮನಸ್ಸುಗಳಿಗೆ ಹೇಗೆ ನೋವು ನೀಡುತ್ತದೆ ಎಂಬುದನ್ನು ತಿಳಿಸಿದ್ದರು. ಅಲ್ಲದೆ ಸುಶಾಂತ್ ಗೆಳತಿ ಅಂಕಿತಾ ಲೋಕಂಡೆ ಕೂಡಾ ಸುಶಾಂತ್ ಅವರು ಬಾಲಿವುಡ್ನಲ್ಲಿ ಅನುಭವಿಸಿದ ಅಪಮಾನಗಳು ಹಾಗೂ ಅವರಿಗೆ ಹೇಗೆ ಅಗೌರವ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ತಿಳಿಸಿದ್ದರು."
"ಇದರೊಂದಿಗೆ ಕೆಲವೊಂದು ಮಾಧ್ಯಮಗಳು ಕೂಡಾ ಸುಶಾಂತ್ ಬಗ್ಗೆ ಆಧಾರರಹಿತ, ಅವಹೇಳನಾಕಾರಿ ಲೇಖನಗಳನ್ನು ಬರೆದು ಅವರ ಮನಸ್ಸನ್ನು ಮತ್ತಷ್ಟು ದುರ್ಬಲಗೊಳ್ಳುವಂತೆ ಮಾಡಿದ್ದವು. ಈ ಮೂಲಕ ಮಾಧ್ಯಮಗಳು ಕೂಡಾ ಮೂವಿ ಮಾಫಿಯಾಗೆ ಸಹಾಯ ಮಾಡಿವೆ. ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ ಕೆಲವೊಂದು ಮಾಧ್ಯಮಗಳು ಯಾವುದೇ ನಟ-ನಟಿಯ ಬಗ್ಗೆ ಬರೆಯುವಾಗ ಅವರ ಹೆಸರನ್ನು ಬರೆಯುವುದಿಲ್ಲ. ಇದರಿಂದ ಆ ಮಾಧ್ಯಮಗಳ ಮೇಲೆ ಮೊಕದ್ದಮೆ ಹೂಡಲು ಕೂಡಾ ಸಾಧ್ಯವಿಲ್ಲ. ಉದಾಹರಣೆಗೆ ನನ್ನ ಬಗ್ಗೆ ಏನಾದರೂ ಬರೆಯಬೇಕೆಂದರೆ ಬಾಲಿವುಡ್ನ ಗುಂಗುರು ಕೂದಲಿನ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ, ಮನಾಲಿಯ ಹುಡುಗಿ ಎಂದೆಲ್ಲಾ ವಿವರ ಬರೆಯುತ್ತಾರೆಯೇ ವಿನ: ನನ್ನ ಹೆಸರನ್ನು ಬರೆಯುವುದಿಲ್ಲ."
"ಅದೇ ರೀತಿ ಸುಶಾಂತ್ ಅವರ ಬಗ್ಗೆಯೂ ಕೆಲವೊಂದು ಮಾಧ್ಯಮಗಳು ಕೆಟ್ಟದಾಗಿ ಬಿಂಬಿಸಿದ್ದವು. ಸುಶಾಂತ್ ಸಿಂಗ್ ರಜಪೂತ್ ನೋಡಲು ಟ್ರಕ್ ಡ್ರೈವರ್ನಂತೆ ಕಾಣುತ್ತಾರೆ ಎಂದು ಒಂದು ಮಾಧ್ಯಮ ಬರೆದರೆ ಮತ್ತೊಂದು ಮಾಧ್ಯಮ ಸುಶಾಂತ್ ಪಾರ್ಟಿಯೊಂದರಲ್ಲಿ ಕುಡಿದ ಅಮಲಿನಲ್ಲಿ ನಿರ್ದೇಶರೊಬ್ಬರ ತಲೆಗೆ ಬಾಟಲ್ನಲ್ಲಿ ಹೊಡೆದಿದ್ದರು ಎಂದು ಬರೆದಿದೆ. ಇನ್ನೊಂದು ಪತ್ರಿಕೆ ಸುಶಾಂತ್ ತನ್ನ ಸಹನಟಿಯೊಬ್ಬರನ್ನು ಅತ್ಯಾಚಾರ ಮಾಡಿದ್ದು ಮಿ ಟೂ ಆರೋಪದ ಅಡಿಯಲ್ಲಿ ಆತ ಜೈಲಿಗೆ ಹೋಗುವ ಸಂಭವವಿದೆ ಎಂದು ಬರೆದಿತ್ತು. ಆದರೆ ಇದನ್ನೆಲ್ಲಾ ಉದ್ದೇಶಪೂರಕವಾಗಿ ಬರೆಯಲಾಗಿದೆಯೇ ಹೊರತು ಇಲ್ಲಿ ಬರೆದಿರುವುದು ಯಾವುದೂ ನಿಜವಲ್ಲ. ಈ ಲೇಖನಗಳಿಂದ ಕೂಡಾ ಸುಶಾಂತ್ ಬಹಳ ನೊಂದಿದ್ದರು" ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.