ಬಟಿಂಡಾ (ಪಂಜಾಬ್):ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಮಾನನಷ್ಟ ಮೊಕದ್ದಮೆ ಪ್ರಕರಣದ ಹಿನ್ನೆಲೆ ಪಂಜಾಬ್ನ ಬಟಿಂಡಾ ನ್ಯಾಯಾಲಯವು ಇಂದು ಸಮನ್ಸ್ ಜಾರಿ ಮಾಡಿದೆ. ಏಪ್ರಿಲ್ 9 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ನಟಿಗೆ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ.
ನಟಿಯ ಹೇಳಿಕೆ ಖಂಡಿಸಿ 4 ಜ. 2021 ರಂದು ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದ ಬಹದ್ದೂರ್‌ಘರ್ ಜಾಂಡಿಯಾ, ಮಹಿಂದರ್ ಕೌರ್ ಅವರು ಬಟಿಂಡಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಸುಮಾರು 13 ತಿಂಗಳ ಕಾಲ ವಿಚಾರಣೆ ನಡೆದಿದ್ದು, ಇದೀಗ ನ್ಯಾಯಾಲಯವು ಕಂಗನಾಗೆ ಸಮನ್ಸ್ ಜಾರಿ ಮಾಡಿದೆ.
ಅಂದು ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ನಟಿ ಕಂಗನಾ ರಣಾವತ್ ಅವರಿಗೆ ಬಂಧನ ವಾರಂಟ್ ಕೂಡ ಹೊರಡಿಸಬಹುದು ಎಂದು ಮಹಿಂದರ್ ಕೌರ್ ಪರ ವಕೀಲ ರಘುವೀರ್ ಸಿಂಗ್ ಬಹ್ನಿವಾಲ್ ಹೇಳಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದರೆ ನಟಿಯು ಕಂಠಕದಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ.
ತಮ್ಮ ದೂರಿನಲ್ಲಿ ಕಂಗನಾ ಅವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಟ್ವೀಟ್‌ನಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದಾರೆ. ನಾನು 100 ರೂ.ಗಳಿಗೆ ಲಭ್ಯವಿರುವ ರೈತ ಮಹಿಳೆ ಎಂದು ಬರೆದು ನನ್ನ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಕೌರ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಅಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಹೋರಾಟದಲ್ಲಿ ರೈತ ಮಹಿಳೆ ಮಹಿಂದರ್ ಕೌರ್ ಭಾಗವಹಿಸಿದ್ದರು. ಅವರನ್ನು ಈ ಹಿಂದೆ ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ಮಾಡಿದ್ದ ವೃದ್ಧೆ ಬಿಲ್ಕಿಸ್ ಬಾನೋ ಎಂದು ತಿಳಿದುಕೊಂಡು ತಪ್ಪಾಗಿ ಟ್ವೀಟ್ ಮಾಡಲಾಗಿತ್ತು.
'ಶಾಹೀನ್ ಬಾಗ್‌ನಲ್ಲಿ ಪ್ರತಿಭಟನೆ ಮಾಡಿದ ಅದೇ ಅಜ್ಜಿ ಈಗ ರೈತ ಮಹಿಳೆ ಆಗಿದ್ದಾಳೆ. 100 ರೂಪಾಯಿಗೆ ಈಕೆ ಸಿಗುತ್ತಾಳೆ' ಎಂದು ಕಂಗನಾ ಟ್ವೀಟ್ ಮಾಡಿದ್ದರು. ಬಳಿಕ ತಮ್ಮಿಂದ ತಪ್ಪಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅವರು ಆ ಟ್ವೀಟ್ ಡಿಲೀಟ್ ಮಾಡಿದ್ದರು.
ಇದನ್ನೂ ಓದಿ: ಗಂಗೂಬಾಯಿ ಕಥಿಯಾವಾಡಿ ಚಿತ್ರದ ವಿರುದ್ಧದ 2 ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್