ಹೈದರಾಬಾದ್ : ಬಹು ನಿರೀಕ್ಷಿತ ತಲೈವಿ ಸಿನಿಮಾದ ಟ್ರೈಲರ್ ಮಾರ್ಚ್ 23 ರಂದು ಚೆನ್ನೈ ಮತ್ತು ಮುಂಬೈನಲ್ಲಿ ಬಿಡುಗಡೆಯಾಗಲಿದೆ. ಅಂದು ಚಿತ್ರದ ನಟಿ ಕಂಗನಾ ರಣಾವತ್ ಅವರ ಜನ್ಮ ದಿನ ಕೂಡ ಆಗಿದೆ.
ಚಿತ್ರದಲ್ಲಿ ಕಂಗನಾ ರಣಾವತ್ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದು, ತಾನು ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.
"ಈ ಜೀವನಾಧಾರಿತ ಚಿತ್ರದ ಚಿತ್ರೀರಿಕರಣದ ಸಮಯದಲ್ಲಿ 20 ಕೆ.ಜಿ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಕೆಲವೇ ತಿಂಗಳುಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳುವುದು ನಾನು ಎದುರಿಸಿದ ಸವಾಲು. ಇನ್ನು ಕೆಲವೇ ಗಂಟೆಗಳಲ್ಲಿ ಕಾಯುವಿಕೆ ಕೊನೆಗೊಳ್ಳಲಿದೆ, ಜಯಾ ಸದಾ ನಮ್ಮೊಂದಿಗೆ ಇರಲಿದ್ದಾರೆ" ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
ಓದಿ : ದೋಬಾರಾ ಚಿತ್ರದ ಚಿತ್ರೀಕರಣ 23 ದಿನಗಳಲ್ಲಿ ಅಂತ್ಯ: ಸಿನಿಮಾ ರಹಸ್ಯ ಬಿಚ್ಚಿಟ್ಟ ತಾಪ್ಸಿ
ತಲೈವಿ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದು ತಮಿಳುನಾಡು ಮಾಜಿ ಸಿಎಂ ಜೀವನಾಧಾರಿತ ಸಿನಿಮಾ ಆದರೂ, ಭಾಷಾ ಮಿತಿಗಳನ್ನು ಮೀರಿ ಜನ ಮನ್ನಣೆಗಳಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಚಿತ್ರ ತಂಡ, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಚೆನ್ನೈ ಮತ್ತು ಮುಂಬೈನಾದ್ಯಂತ ಟ್ರೈಲರ್ ಅನ್ನು ಬೃಹತ್ ವೇದಿಕೆಯಲ್ಲಿ ಬಿಡುಗಡೆಗೆ ನಿರ್ಧರಿಸಿದೆ.
ತಲೈವಿ ಸಿನಿಮಾ, ನಟಿಯಾಗಿದ್ದ ಜಯಲಲಿತಾ ಅವರು ಪವರ್ಫುಲ್ ರಾಜಕಾರಣಿಯಾಗಿ ಬೆಳೆದು ತಮಿಳುನಾಡು ಸಿಎಂ ಪಟ್ಟಕ್ಕೇರಿದ ಅವಧಿವರೆಗಿನ ಕಥೆಯನ್ನು ಬಿಚ್ಚಿಡಲಿದೆ. ಮಾರ್ಚ್ 23 ರಂದು, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಝೀ ಸ್ಟುಡಿಯೋ ಮೂಲಕ 'ತಲೈವಿ' ಬಿಡುಗಡೆಯಾಗಲಿದೆ.