ಮುಂಬೈ:ನಿರ್ಮಾಪಕ ಕರಣ್ ಜೋಹರ್ ಕಂಡರೆ ಯಾವಾಗಲು ಕೆಂಡ ಕಾರುತ್ತಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಶೇರ್ಶಾ' ಸಿನಿಮಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಬಾಲಿವುಡ್ ಕ್ವಿನ್, ಎದೆತಟ್ಟುವಂತಹ ಚಿತ್ರವನ್ನು ನಿರ್ಮಾಣ ಮಾಡಿದ ಕರಣ್ ಜೋಹರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಡ್ರಗ್ಸ್ ಪ್ರಕರಣ ಹಾಗೂ ನಟ ಸುಶಾಂತ್ ಸಿಂಗ್ ರಾಜಪುತ್ ನಿಗೂಢ ಸಾವಿನ ಬಳಿಕ ಕಂಡಲ್ಲಿ ಕೆಂಡ ಕಾರುತ್ತಿದ್ದ ನಟಿ ಕಂಗನಾ ನಿರ್ಮಾಪಕ ಕರಣ್ ಜೋಹರ್ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಗೆ ಆಹಾರವಾಗಿದ್ದರು. ನಟಿಯ ಕೆಲವು ಹೇಳಿಕೆಗಳು ವಿವಾದಗಳನ್ನೇ ಹುಟ್ಟು ಹಾಕಿದ್ದವು. ಅಲ್ಲಿಂದ ನಟಿ ಕಂಗನಾ ಹಾಗೂ ನಿರ್ಮಾಪಕ ಕರಣ್ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.
ಧರ್ಮ ಪ್ರೊಡಕ್ಷನ್ಸ್ನಲ್ಲಿ ಮೂಡಿಬಂದ 'ಶೇರ್ಶಾ' ಎಂಬ ಮನತಟ್ಟುವ ಸಿನಿಮಾ ನಿರ್ಮಾಣ ಮಾಡಿರುವ ಕರಣ್ ಜೋಹರ್ ಕೆಲಸ ಕಂಡು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಪರಮವೀರ ಚಕ್ರ ಪುರಸ್ಕೃತ ವಿಕ್ರಮ್ ಭಾತ್ರಾ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ನಟಿ ಕಂಗನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.