ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ 'ತಲೈವಿ' ನಂತರ ತೇಜಸ್ ಸಿನಿಮಾದಲ್ಲಿ ನಟಿಸುತ್ತಿದ್ದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಕೆಲವೊಂದು ಫೋಟೋಗಳನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಹೋದರಿ ರಂಗೋಲಿ ಚಂದೇಲ್ ಹಾಗೂ ಇನ್ನಿತರರೊಂದಿಗೆ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಕಂಗನಾ ರಣಾವತ್, ''ರಕ್ಷಣಾ ಸಚಿವರಾದ ರಾಜ್ನಾಥ್ ಸಿಂಗ್ ಅವರನ್ನು ಇಂದು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. 'ತೇಜಸ್' ಚಿತ್ರದ ಸ್ಕ್ರಿಪ್ಟನ್ನು ರಾಜ್ನಾಥ್ ಸಿಂಗ್ ಹಾಗೂ ಭಾರತೀಯ ವಾಯು ಸೇನೆಯೊಂದಿಗೆ ಹಂಚಿಕೊಂಡಿದ್ದು ಕೆಲವೊಂದು ದೃಶ್ಯಗಳ ಚಿತ್ರೀಕರಣಕ್ಕಾಗಿ ಅನುಮತಿ ಕೋರಿದ್ದೇವೆ'' ಎಂದು ಕಂಗನಾ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ಕಂಗನಾ ಯುದ್ಧ ವಿಮಾನದ ಪೈಲೆಟ್ ಆಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು ಕಂಗನಾ, ಯುದ್ಧ ವಿಮಾನದ ಮುಂದೆ ಸಮವಸ್ತ್ರ ಧರಿಸಿ ನಡೆದು ಬರುತ್ತಿರುವ ದೃಶ್ಯವಿದೆ. ಸರ್ವೇಶ್ ಮೇವಾರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.