ಎಸ್.ಎಸ್. ರಾಜಮೌಳಿ ನಿರ್ದೇಶನದ ಹಾಗೂ ತೆಲುಗಿನ ಪ್ರಭಾಸ್ ನಟನೆಯ 'ಬಾಹುಬಲಿ' ಚಿತ್ರದ ಯಶಸ್ಸಿನ ನಂತರ ಇಡೀ ದಕ್ಷಿಣ ಭಾರತದ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿತು. ಸ್ಯಾಂಡಲ್ವುಡ್ನ ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್' ವಿಶ್ವದೆಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಟಾಲಿವುಡ್ನ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರ ಕೂಡ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ದಕ್ಷಿಣ ಭಾರತದ ನಟರಾದ ಯಶ್ ಮತ್ತು ಬನ್ನಿಯನ್ನು ಹಾಡಿ ಹೊಗಳಿದ್ದಾರೆ. ಅವರಿಬ್ಬರ 'ಕೆಜಿಎಫ್' ಮತ್ತು 'ಪುಷ್ಪ' ಚಿತ್ರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ನಟಿ, ದಕ್ಷಿಣ ಚಲನಚಿತ್ರಗಳ ಯಶಸ್ಸು ಮತ್ತು ರಾಷ್ಟ್ರದಾದ್ಯಂತ ಅಲ್ಲಿನ ನಟರ ಜನಪ್ರಿಯತೆ ಹೆಚ್ಚಾಗಲು ಮೂರು ಕಾರಣವನ್ನು ತಿಳಿಸಿದ್ದಾರೆ.
"ದಕ್ಷಿಣದ ವಿಷಯ (ಸಿನಿಮಾ ಕಂಟೆಂಟ್) ಮತ್ತು ಸೂಪರ್‌ಸ್ಟಾರ್‌ಗಳು ಈ ಮಟ್ಟ ತಲುಪಲು ಕಾರಣಗಳೆಂದರೆ 1) ಅವರು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ, 2) ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ ಮತ್ತು ಸಂಬಂಧಗಳು ಸಾಂಪ್ರದಾಯಿಕವಾಗಿವೆ ಹೊರತು ಪಾಶ್ಚಿಮಾತ್ಯವಲ್ಲ, 3) ಅವರ ವೃತ್ತಿಪರತೆ ಮತ್ತು ಉತ್ಸಾಹ ಸಾಟಿಯಿಲ್ಲದವು" ಎಂದು ಕಂಗನಾ ಬರೆದುಕೊಂಡಿದ್ದಾರೆ.