ಮುಂಬೈ (ಮಹಾರಾಷ್ಟ್ರ):ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಎನ್‍ಸಿಬಿ ಬಲೆಗೆ ಬಿದ್ದಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಪರ ಖ್ಯಾತ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಬ್ಯಾಟ್ ಬೀಸಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಗುಜರಾತಿನ ಬಂದರಿನಲ್ಲಿ ಭಾರಿ ಪ್ರಮಾಣದಲ್ಲಿ (ಸುಮಾರು 1 ಮಿಲಿಯನ್ ಡಾಲರ್ನಷ್ಟು) ಡ್ರಗ್ ಸೀಜ್ ಮಾಡಲಾಗಿತ್ತು. ಆ ಪ್ರಮಾಣದಲ್ಲಿ ಡ್ರಗ್ ಸಿಕ್ಕರೂ ಆ ಸುದ್ದಿ ಅಷ್ಟು ಸದ್ದು ಮಾಡಲಿಲ್ಲ. ಆದರೆ, ಬಾಲಿವುಡ್ನ ಖ್ಯಾತ ನಟರ ಮಗ ಡ್ರಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ಮಾತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ ಎಂದು ಕಿಡಿಕಾರಿದರು. ಆರ್ಯನ್ ಖಾನ್ ಪ್ರಕರಣವನ್ನು ಉದ್ದೇಶಪೂರ್ವಕವಾಗಿಯೇ ಸುದ್ದಿ ಮಾಡಲಾಗುತ್ತಿದೆ. ಅಲ್ಲದೇ ಈ ಬಗ್ಗೆ ಮಾತನಾಡದಿದ್ದಲ್ಲಿ ಮುಂದೊಂದು ದಿನ ಬಾಲಿವುಡ್ ಚಿತ್ರರಂಗ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.