ಮುಂಬೈ: ಭಾರತದ ಅತಿದೊಡ್ಡ ಮ್ಯೂಸಿಕ್ ರೆಕಾರ್ಡ್ ಲೇಬಲ್ ಮತ್ತು ಚಲನಚಿತ್ರ ನಿರ್ಮಾಣ ಕಂಪನಿಯಾಗಿರುವ ಟಿ-ಸಿರೀಸ್ ಹೊಸ ದಾಖಲೆಯೊಂದನ್ನು ಬರೆದಿದೆ. 200 ಮಿಲಿಯನ್ ಚಂದಾದಾರರನ್ನು ದಾಟಿದ ವಿಶ್ವದ ಏಕೈಕ ಯೂಟ್ಯೂಬ್ ಚಾನಲ್ ಆಗಿ ಹೊರಹೊಮ್ಮಿದೆ.
ಟಿ-ಸಿರೀಸ್ ಕಂಪನಿಯನ್ನು ಜುಲೈ 11, 1983 ರಂದು ಗುಲ್ಶನ್ ಕುಮಾರ್ ಅವರು ಸ್ಥಾಪಿಸಿದರು. ಆದರೆ 1997ರಲ್ಲಿ ಇವರು ಕೊಲೆಯಾದರು. ಆ ನಂತರ ಕಂಪನಿಯನ್ನು ಅವರ ಮಗ ಭೂಷಣ್ ಕುಮಾರ್ ನೋಡಿಕೊಂಡು ಬಂದಿದ್ದಾರೆ. ಭೂಷಣ್ ಕುಮಾರ್ ಅವರು ಕಂಪನಿಯ ಮುಖ್ಯಸ್ಥ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ನೀರಜ್ ಕಲ್ಯಾಣ್ ಎಂಬುವರು ಇದರ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ಇಂದು ಪಿಂಕ್ ಸಿಟಿಗೆ ಬರುವ ವಿಕ್ಕಿ-ಕತ್ರಿನಾ ಜೋಡಿಗೆ ಭವ್ಯ ಸ್ವಾಗತ.. ನಾಳೆಯಿಂದ ವಿವಾಹ ಕಾರ್ಯಕ್ರಮಗಳು ಶುರು
ಇದೀಗ ಟಿ-ಸಿರೀಸ್ ಕಂಪನಿಯ ಯೂಟ್ಯೂಬ್ ಚಾನಲ್ 200 ಮಿಲಿಯನ್ ಚಂದಾದಾರರನ್ನು ದಾಟಿದೆ. ಈ ಬಗ್ಗೆ ಮಾತನಾಡಿರುವ ಭೂಷಣ್ ಕುಮಾರ್, "ಇಂತಹ ಬೃಹತ್ ಚಂದಾದಾರರ ಸಂಖ್ಯೆಯನ್ನು ತಲುಪಿದ ವಿಶ್ವದ ಪ್ರಥಮ ಭಾರತೀಯ ಯೂಟ್ಯೂಬ್ ಚಾನಲ್ ಆಗಿರುವುದಕ್ಕೆ ನಮಗೆ ತುಂಬಾ ಖುಷಿಯಾಗಿದೆ. ಇದು ನಿಜಕ್ಕೂ ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಿ ಇದಕ್ಕೆ ಕಾರಣಕರ್ತರಾದ ಅಭಿಮಾನಿಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನನ್ನ ಡಿಜಿಟಲ್ ಮತ್ತು ಸಂಗೀತ ತಂಡಗಳಿಗೆ ನಾನು ಈ ಯಶಸ್ಸನ್ನು ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.
ಭೂಷಣ್ ಕುಮಾರ್ ಮತ್ತು ನೀರಜ್ ಕಲ್ಯಾಣ್
"ಸಂಗೀತವು ಯಾವಾಗಲೂ ನಮ್ಮ ಶಕ್ತಿ, ನಮ್ಮ ಉತ್ಸಾಹ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಕಂಪನಿಯು ದೇಶದ ಒಳಗೆ ಮತ್ತು ಹೊರಗೆ ಎರಡೂ ದಿಗ್ಭ್ರಮೆಗೊಳಿಸುವ ಜನಪ್ರಿಯತೆಯನ್ನು ಗಳಿಸುತ್ತಿದೆ. ನಮ್ಮ ತಂಡವು ಇದನ್ನು ಸಾಧಿಸಲು ಬಹಳಷ್ಟು ಶ್ರಮಿಸಿದೆ. ನಮ್ಮ ಸಂತಸವನ್ನು ಗೂಗಲ್ ಮತ್ತು ಯೂಟ್ಯೂಬ್ ಜೊತೆ ಹಂಚಿಕೊಳ್ಳಲು ನಿಜಕ್ಕೂ ಉತ್ಸುಕರಾಗಿದ್ದೇವೆ" ಎನ್ನುತ್ತಾರೆ ನೀರಜ್ ಕಲ್ಯಾಣ್.