ಮುಂಬೈ:ತನ್ನ ಇಂಪಾದ ದನಿಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಮಾನವೀಯತೆ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.
ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್-11 ಶೋ ಸ್ಪರ್ಧಿಯೊಬ್ಬರಿಗೆ ನೇಹಾ ಕಕ್ಕರ್ ದೀಪಾವಳಿ ಆಚರಿಸಲು ಒಂದು ಲಕ್ಷ ರೂ. ನೀಡಿ ಬಡ ಸ್ಪರ್ಧಿಯ ಬಾಳಿಗೆ ಬೆಳಕು ತಂದಿದ್ದಾರೆ.
ಜಾರ್ಖಂಡ್ ಮೂಲಕ ಪುಟ್ಟ ಹಳ್ಳಿಯ ದಿವಸ್ ಹೆಸರಿನ ಸ್ಪರ್ಧಿ ವೇದಿಕೆ ಆಗಮಿಸಿದ ವೇಳೆ ಕಾರ್ಯಕ್ರಮದ ಜಡ್ಜ್ ಆತನ ಬಳಿ ದೀಪಾವಳಿ ಹೇಗೆ ಆಚರಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ವೇಳೆ ಕಣ್ಣೀರಾದ ದಿವಸ್, ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.
ಇಂಡಿಯನ್ ಐಡಲ್ ಸ್ಪರ್ಧಿ ದಿವಸ್ ಕಳೆದ ಆರು ವರ್ಷಗಳಲ್ಲಿ ಹಬ್ಬವನ್ನೇ ಆಚರಿಸಿಲ್ಲ, ಒಂದರ್ಥದಲ್ಲಿ ಯಾವಾಗ ಹಬ್ಬ ಎನ್ನುವ ವಿಚಾರವೇ ನನ್ನ ಅರಿವಿಗೆ ಬಂದಿಲ್ಲ. ಹೋಟೆಲ್ಗಳಲ್ಲಿ ಪಾತ್ರೆ ತೊಳೆಯುತ್ತಾ ಕಷ್ಟದ ದಿನಗಳನ್ನು ದೂಡಿದೆ. ಈ ಸಂದರ್ಭದಲ್ಲಿ ಬದುಕಲ್ಲಿ ಬೆಳಕೇ ಇರಲಿಲ್ಲ ಎಂದು ದುಃಖತಪ್ತನಾಗಿ ಹೇಳಿದ್ದಾನೆ.
ದಿವಸ್ ಗಾಯನವನ್ನು ಮೆಚ್ಚಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಸಹ ಟ್ವೀಟ್ ಮಾಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿದ ದಿವಸ್, ನಾನು ಸಚಿನ್ ಅವರಿಗೆ ಕೊನೆತನಕ ಆಭಾರಿಯಾಗಿರುತ್ತೇನೆ ಎಂದಿದ್ದಾರೆ.
ಖ್ಯಾತ ಗಾಯಕಿ ಹಾಗೂ ಇಂಡಿಯನ್ ಐಡಲ್ ಜಡ್ಜ್ ನೇಹಾ ಕಕ್ಕರ್ ದಿವಸ್ ಮಾತನ್ನು ಕೇಳಿ ಭಾವುಕರಾದ ಶೋನ ಮತ್ತೋರ್ವ ಜಡ್ಜ್ ನೇಹಾ ಕಕ್ಕರ್, ಆ ಕ್ಷಣವೇ ಒಂದು ಲಕ್ಷ ನಾನು ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ನೀವು ಆ ಹಣದಲ್ಲಿ ವಿಮಾನದ ಮೂಲಕ ಊರಿಗೆ ತೆರಳಿ, ಇಷ್ಟದ ಬಟ್ಟೆ ಹಾಗೂ ಸಿಹಿತಿನಿಸನ್ನು ಖರೀದಿಸಿ ಮನೆಯವರೊಂದಿಗೆ ಹಬ್ಬ ಆಚರಿಸಿ ಎಂದು ಹೇಳಿದ್ದಾರೆ.
ಇಂಡಿಯನ್ ಐಡಲ್ನ ಈ ಭಾವುಕ ಪ್ರೋಮೋ ಶನಿವಾರ ರಿಲೀಸ್ ಆಗಿದ್ದು, ದಿವಸ್ ಕಣ್ಣೀರು ಹಾಗೂ ನೇಹಾ ಕಕ್ಕರ್ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣಿಗರು ಮೆಚ್ಚುಗೆ ಸೂಚಿಸಿದ್ದಾರೆ.