ಶಿಮ್ಲಾ (ಹಿಮಾಚಲ ಪ್ರದೇಶ):ನಟಿ ಕಂಗನಾ ರಣಾವತ್ರನ್ನು ಅವಹೇಳನಕಾರಿ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಶಿವಸೇನೆ ಸಂಸದ ಸಂಜಯ್ ರಾವತ್ ವಿರುದ್ಧ ಹಿಮಾಚಲ ಪ್ರದೇಶದ ಬಿಜೆಪಿ ಐಟಿ ಘಟಕ ಶಿಮ್ಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಸಂಜಯ್ ರಾವತ್ ಬಳಸಿರುವ ಭಾಷೆ ಅಸಂವಿಧಾನಿಕವಾಗಿದ್ದು, ನಟಿಯನ್ನು ನಿಂದಿಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಂಸದನ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 509 ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಮುಂಬೈಯನ್ನ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಕಂಗನಾ ವಿರುದ್ಧ ರಾವತ್ ಹೇಳಿಕೆಗಳನ್ನು ನೀಡಿದ್ದರು. ಮಹಾರಾಷ್ಟ್ರ ಜನತೆ ಬಳಿ ಕಂಗನಾ ಕ್ಷಮೆಯಾಚಿಸಿದರೆ ನಾನು ಕಂಗನಾ ಬಳಿ ಕ್ಷಮೆ ಕೇಳುವೆ ಎಂದು ಸಂಜಯ್ ರಾವತ್ ಹೇಳಿದ್ದರು.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರ, ಡ್ರಗ್ಸ್ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರಣಾವತ್ಗೆ ಜೀವ ಬೆದರಿಕೆಯಿದ್ದು, ಕೇಂದ್ರ ಸರ್ಕಾರ ‘Y’ ಪ್ಲಸ್ ಲೆವೆಲ್ ಭದ್ರತೆ ನೀಡಿದೆ.