ಮುಂಬೈ:'ದಿ ಕ್ವೀನ್ ಆಫ್ ಇಂಡಿಪಾಪ್' ಎಂದೇ ಹೆಸರಾದ ಬಾಲಿವುಡ್ ಹಿರಿಯ ಗಾಯಕಿ ಆಶಾ ಭೋಂಸ್ಲೆ ಅವರಿಗೆ ಇಂದು 87 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆಶಾ ಭೋಂಸ್ಲೆ ಸುಮಾರು 6 ದಶಕಗಳಿಂದ ತಮ್ಮ ಹಾಡುಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆಶಾ ಎಷ್ಟೋ ವರ್ಷಗಳ ಹಿಂದೆ ಹಾಡಿರುವ ಕೆಲವೊಂದು ಹಾಡುಗಳನ್ನು ಇಂದಿಗೂ ಸಂಗೀತಪ್ರಿಯರು ಗುನುಗುತ್ತಿರುತ್ತಾರೆ.
ಚುರಾ ಲಿಯಾ ಹೈ ತುಮ್ ನೇ ಜೊ ದಿಲ್ಕೊ: 'ಯಾದೋಂಕಿ ಭಾರತ್' ಚಿತ್ರದ ಈ ಹಾಡು ಆಶಾ ಭೋಂಸ್ಲೆ ಹಾಡಿರುವ ಫೇಮಸ್ ಗೀತೆಗಳಲ್ಲಿ ಒಂದು. ಧರ್ಮೇಂದ್ರ, ಜೀನತ್ ಅಮಾನ್, ತರಿಖ್ ಖಾನ್, ನೀತು ಸಿಂಗ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆರ್. ಡಿ. ಬರ್ಮನ್ ಸಂಗೀತ ನಿರ್ದೇಶನದ ಈ ಹಾಡನ್ನು ಆಶಾ ಜೊತೆ ಮೊಹ್ಮದ್ ರಫಿ ಹಾಡಿದ್ದರು.
ಪಿಯಾ ತೂ ಅಬ್ ತೊ ಆಜಾ: ಈ ಹಾಡು ಕೂಡಾ ಇಂದಿಗೂ ಎವರ್ ಗ್ರೀನ್. 'ಚರ್ವಾನ್' ಚಿತ್ರದ ಈ ಹಾಡನ್ನು ಆಶಾ ಜೊತೆಗೆ ಆರ್.ಡಿ. ಬರ್ಮನ್ ಹಾಡಿದ್ದರು. ಈ ಹಾಡು ಡ್ಯಾನ್ಸರ್ ಹೆಲೆನ್ಗೆ ಕೂಡಾ ಒಳ್ಳೆ ಹೆಸರು ನೀಡಿತ್ತು. ಈ ಹಾಡನ್ನು ರೀಮಿಕ್ಸ್ ಮಾಡಲಾಗಿದೆ.
ಇಂತಿಹ ಹೋಗಯಿ ಇಂತ್ಜಾರ್ ಕಿ: 1984 ರಲ್ಲಿ ಬಿಡುಗಡೆಯಾದ 'ಶರಾಬಿ' ಚಿತ್ರಕ್ಕಾಗಿ ಆಶಾ ಭೋಂಸ್ಲೆ ಈ ಹಾಡು ಹಾಡಿದ್ದರು. ತೆರೆ ಹಿಂದೆ ಈ ಹಾಡನ್ನು ಆಶಾ ಹಾಗೂ ಕಿಶೋರ್ ಕುಮಾರ್ ಹಾಡಿದ್ದರೆ ತೆರೆ ಮೇಲೆ ಈ ಹಾಡಿಗೆ ಅಮಿತಾಬ್ ಬಚ್ಚನ್ ಹಾಗೂ ಜಯಪ್ರದ ನಟಿಸಿದ್ದರು.
ಹೇ ಮೆರಾ ದಿಲ್ ಪ್ಯಾರ್ ಕಾ ದೀವಾನ:1978 ರಲ್ಲಿ ಬಿಡುಗಡೆಯಾದ ಅಮಿತಾಬ್ ನಟನೆಯ 'ಡಾನ್' ಚಿತ್ರದ ಹಾಡು ಇದು. ಈ ಹಾಡು ಕೂಡಾ ಕೂಡಾ ಇಂದಿಗೂ ಸಖತ್ ಫೇಮಸ್. ಈ ಹಾಡಿಗಾಗಿ ಆಶಾ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ದೊರೆಯಿತಲ್ಲದೆ, ಎಲ್ಲೆಡೆಯಿಂದ ಭಾರೀ ಪ್ರಶಂಸೆ ವ್ಯಕ್ತವಾಯ್ತು.
ದಿಲ್ ಚೀಸ್ ಕ್ಯಾ ಹೆ ಆಪ್ ಮೆರಿ: ಉತ್ತಮ ಗಾಯಕಿ ಪ್ರಶಸ್ತಿ ಪಡೆದ ಈ ಹಾಡನ್ನು ಆಶಾ ಭೋಂಸ್ಲೆ 'ಉಮ್ರಾವ್ ಜಾನ್' ಚಿತ್ರಕ್ಕಾಗಿ ಹಾಡಿದ್ದರು. ಬಾಲಿವುಡ್ ಹಿರಿಯ ನಟಿ ರೇಖಾ 1981 ರಲ್ಲಿ ಈ ಹಾಡಿಗಾಗಿ ಹೆಜ್ಜೆ ಹಾಕಿದ್ದರು.
ದೊ ಲಫ್ಜೋ ಕಿ ಹೈ ದಿಲ್ ಕಿ ಕಹಾನಿ: ವೆನ್ನಿಸ್ನಲ್ಲಿ ಚಿತ್ರೀಕರಿಸಲಾದ 'ಗ್ರೇಟ್ ಗ್ಯಾಂಬ್ಲರ್' ಚಿತ್ರದ ಹಾಡಿಗಾಗಿ ಆಶಾ ಈ ಹಾಡು ಹಾಡಿದ್ದಾರೆ. ಅಮಿತಾಬ್ ಹಾಗೂ ಜೀನತ್ ಅಮಾನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆರ್. ಡಿ. ಬರ್ಮನ್ ಸಂಗೀತ ನಿರ್ದೇಶನದ ಈ ಚಿತ್ರವನ್ನು ಶಕ್ತಿ ಸಮಂತ ನಿರ್ದೇಶಿಸಿದ್ದಾರೆ.
ಧಮ್ ಮಾರೋ ಧಮ್:ಈ ಹಾಡನ್ನು ಯಾರು ತಾನೇ ಕೇಳಿಲ್ಲ ಹೇಳಿ..? ಇಂದಿನ ಜನರೇಷನ್ಗೆ ತಕ್ಕಂತೆ ಇ ಹಾಡನ್ನು ರೀಮಿಕ್ಸ್ ಕೂಡಾ ಮಾಡಲಾದರೂ ಮೂಲ ಹಾಡಿನ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವೇ ಇಲ್ಲ. ಆನಂದ್ ಭಕ್ಷಿ ಸಾಹಿತ್ಯ ಬರೆದು ಆರ್.ಡಿ. ಬರ್ಮನ್ ಸಂಗೀತ ನಿರ್ದೇಶನದ ಈ ಹಾಡು 1971 ರಲ್ಲಿ ಬಿಡುಗಡೆಯಾದ 'ಹರೇ ರಾಮ್ ಹರೇ ಕೃಷ್ಣ' ಚಿತ್ರದ್ದು. ಇಂದಿಗೂ ಅನೇಕ ಪಾರ್ಟಿಗಳಲ್ಲಿ ಈ ಹಾಡನ್ನು ಬಳಸಲಾಗುತ್ತದೆ. ಈ ಹಾಡಿಗಾಗಿ ಕೂಡಾ ಆಶಾ ಭೋಂಸ್ಲೆ ಅವರಿಗೆ ಫಿಲ್ಮ್ ಫೇರ್ ಉತ್ತಮ ಗಾಯಕಿ ಪ್ರಶಸ್ತಿ ದೊರೆತಿದೆ. ದೇವಾನಂದ್ ಹಾಗೂ ಜೀನತ್ ಅಮಾನ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಏಕ್ ಮೆ ಔರ್ ಏಕ್ ತೂ: ರಿಷಿ ಕಪೂರ್, ನೀತು ಸಿಂಗ್ ಅಭಿನಯಿಸಿರುವ ಈ ಹಾಡನ್ನು ಆಶಾ ಭೋಂಸ್ಲೆ ಹಾಗೂ ಕಿಶೋರ್ ಕುಮಾರ್ ಹಾಡಿದ್ದಾರೆ. ಗುಲ್ಷನ್ ಬಾವ್ರಾ ಬರೆದಿರುವ ಈ ಹಾಡಿಗೆ ಆರ್.ಡಿ. ಬರ್ಮನ್ ಸಂಗೀತ ನೀಡಿದ್ದರು. 1975 ರಲ್ಲಿ ಬಿಡುಗಡೆಯಾದ 'ಖೇಲ್ ಖೇಲ್ ಮೇ' ಚಿತ್ರದ ಹಾಡು ಇದು.
ಮುಜೆ ರಂಗ್ ದೇ:ಅಂದಿನ ಆರ್.ಡಿ. ಬರ್ಮನ್ ಅವರಿಂದ ಹಿಡಿದು ಇಂದಿನ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನದ ಹಾಡಿಗೂ ಹಿರಿಯ ಗಾಯಕಿ ಆಶಾ ಭೋಂಸ್ಲೆ ಹಾಡಿದ್ದಾರೆ. 'ತಕ್ಷಕ್' ಚಿತ್ರದ ಈ ಹಾಡಿಗೆ ತಬು ಹೆಜ್ಜೆ ಹಾಕಿದ್ದರು. ಈ ಹಾಡಿಗೆ ಕೂಡಾ ಆಶಾ ಅವರಿಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಅಜಯ್ ದೇವಗನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಾಡು ಎಷ್ಟು ಫೇಮಸ್ ಆಯ್ತು ಎಂದರೆ 'ದಿ ಆಕ್ಸಿಡೆಂಟಲ್ ಹಸ್ಪೆಂಡ್' ಹಾಲಿವುಡ್ ಸಿನಿಮಾದ ದೃಶ್ಯವೊಂದರಲ್ಲಿ ಕೂಡಾ ಈ ಹಾಡನ್ನು ಬಳಸಿಕೊಳ್ಳಲಾಗಿದೆ.
ತಮ್ಮ ಸುಂದರ ಹಾಡುಗಳ ಮೂಲಕ ಸಂಗೀತಪ್ರಿಯರನ್ನು ಮಂತ್ರಮುಗ್ಧಗೊಳಿಸಿದ ಗಾಯಕಿ ಆಶಾ ಭೋಂಸ್ಲೆ ಅವರಿಗೆ ಈ ಟಿವಿ ಭಾರತದ ವತಿಯಿಂದ ಜನ್ಮದಿನದ ಶುಭಾಶಯಗಳು.