ಬಾಲಿವುಡ್ ಸುಂದರಿ, ಸೂಪರ್ ಸ್ಟಾರ್, ನರ್ತಕಿ, ನಟಿ ಮಾಧುರಿ ದೀಕ್ಷಿತ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1967ರ ಮೇ 15ರಂದು ಮುಂಬೈನಲ್ಲಿ ಜನಿಸಿದ ಈ ಬ್ಯೂಟಿಗೆ 54ವರ್ಷ ತುಂಬಿದ್ದರೂ ಇತರೆ ನಟಿಮಣಿಯರು ಕೂಡ ಒಂದೊಮ್ಮೆ ತಿರುಗಿ ನೋಡುವಂತಹ ಸುಂದರಿ ಈಕೆ.
ಮಾಧುರಿ ದೀಕ್ಷಿತ್ ಮುಂಬೈನ ಮರಾಠಿ ಕುಟುಂಬದ ಶಂಕರ್ ಮತ್ತು ಸ್ನೇಹಲತಾ ದೀಕ್ಷಿತ್ ದಂಪತಿ ಪುತ್ರಿ. ಅವರ ವಿದ್ಯಾಭ್ಯಾಸ ಡಿವೈನ್ ಚೈಲ್ಡ್ ಹೈ ಸ್ಕೂಲ್ ಮತ್ತು ಮುಂಬೈ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಇವರು ನಿಪುಣ ಕಥಕ್ ನರ್ತಕಿಯಾಗಲು ಎಂಟು ವರ್ಷ ತರಬೇತಿ ಪಡೆದಿದ್ದರು. 1999ರಲ್ಲಿ ಶ್ರೀರಾಮ್ ಮಾಧವ್ ನೇನೆ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರರಿದ್ದಾರೆ.
1984ರಲ್ಲಿ ಬಿಡುಗಡೆಯಾದ ಅಬೋಧ್ ಚಿತ್ರದ ಮೂಲಕ ಮಾಧುರಿ ದೀಕ್ಷಿತ್ ಚಿತ್ರರಂಗ ಪ್ರವೇಶಿಸಿದ್ದು, ಹಂತ ಹಂತವಾಗಿ ಸಿನಿಮಾ ರಂಗದಲ್ಲಿ ಬಹಳ ಮನ್ನಣೆ ಪಡಯುತ್ತಾರೆ. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದ ಮಾಧುರಿಗೆ ಅಬೋಧ್ ಚಿತ್ರದ ಸಮಸಯದಲ್ಲಿ ಕೇವಲ 17 ವರ್ಷ. ನಂತರ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ತೇಜಾಬ್’ ಸಿನಿಮಾ ಮೂಲಕ. ಆ ಚಿತ್ರದ ಏಕ್ ದೋ ತೀನ್ ಹಾಡು ಸೂಪರ್ ಹಿಟ್ ಆಗಿದ್ದು, ಇಂದಿಗೂ ಸೂಪರ್ ಸಾಂಗ್ ಎಂಬ ಮನ್ನಣೆಗೆ ಪಾತ್ರವಾಗಿದೆ. ಇನ್ನೂ ಹಮ್ ಆಪ್ಕೆ ಹೈ ಕೌನ್ ಸಿನಿಮಾದಲ್ಲಿ ಅಪಾರ ಜನಪ್ರಿಯತೆ ಗಳಿಸಿದರು.
1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದಾದ್ಯಂತ ಹಿಂದಿ ಚಿತ್ರರಂಗದ ಅಗ್ರ ನಟಿಯರು ಮತ್ತು ನಿಪುಣ ನರ್ತಕಿಯರ ಪೈಕಿ ಒಬ್ಬರೆಂದು ಗುರುತಿಸಿಕೊಂಡಿದ್ದರು. ಈವರೆಗೆ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಅವರ ಅಭಿನಯ ಪ್ರೇಕ್ಷಕರ ಮನದಲ್ಲಿ ಉಳಿದುಕೊಂಡಿದೆ. ಚಲನಚಿತ್ರಗಳ ಜತೆಗೆ ಹಲವಾರು ಪ್ರದರ್ಶನಗಳು ಹಾಗೂ ವಿವಿಧ ಚಲನಚಿತ್ರಗಳಲ್ಲಿನ ನೃತ್ಯಗಳಲ್ಲಿ ಮಿಂಚಿದ್ದ ಮಾಧುರಿ ಈಗಲೂ ಎವರ್ ಗ್ರೀನ್ ಬ್ಯೂಟಿ ಎಂದೇ ಕರೆಸಿಕೊಳ್ಳುತ್ತಾರೆ.