ಹೈದರಾಬಾದ್:ಲಾಕ್ಡೌನ್ ಸಮಯದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದ ರಿಯಲ್ ಹೀರೋ ಸೋನು ಸೂದ್, ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಗ್ರೀನ್ ಇಂಡಿಯಾ ಚಾಲೆಂಜ್ನಲ್ಲಿ ಭಾಗಿಯಾಗಿದ್ದಾರೆ. ನಿರ್ದೇಶಕ ಶ್ರೀನು ವೈಟ್ಲ ಸೋನು ಸೂದ್ ಅವರಿಗೆ ಈ ಚಾಲೆಂಜ್ ನೀಡಿದ್ದರು.
ಗಿಡ ನೆಟ್ಟು ಮಾಧ್ಯಮವರೊಂದಿಗೆ ಮಾತನಾಡಿದ ಸೋನು, "ಈ ಸಂದರ್ಭದಲ್ಲಿ ವಾತಾವರಣವನ್ನು ಉಳಿಸುವುದು ನಮ್ಮೆಲ್ಲರ ಮೊದಲ ಆದ್ಯತೆಯಾಗಿದೆ. ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದರು. ಅಲ್ಲದೆ ಈ ಅಭಿಯಾನ ಆರಂಭಿಸಿದ ರಾಜ್ಯಸಭೆ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಸೋನು ಸೂದ್ ಸಾಮಾಜಿಕ ಚಟುವಟಿಕೆಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಅವರು ತಾವು ಒಪ್ಪಿಕೊಂಡಿರುವ ಸಿನಿಮಾಗಳ ಸ್ಕ್ರಿಪ್ಟ್ನತ್ತ ಗಮನ ಹರಿಸಿರಲಿಲ್ಲ. ಇದೀಗ ಅವರ ಬಳಿ ರಾಶಿ ರಾಶಿ ಸ್ಕ್ರಿಪ್ಟ್ಗಳಿವೆ ಎನ್ನಲಾಗಿದೆ. ಆದರೂ ಸೋನು ಸೂದ್ ಸದ್ಯಕ್ಕೆ ಸಿನಿಮಾಗಳತ್ತ ಗಮನ ಹರಿಸುತ್ತಿಲ್ಲ. ಮತ್ತಷ್ಟು ಕೆಲಸಗಳು ಬಾಕಿ ಇದ್ದು ನಂತರ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ನಿರ್ಮಾಪಕರ ಬಳಿ ಸಮಯ ಕೇಳಿದ್ದಾರೆ ಎನ್ನಲಾಗಿದೆ.
"ನಾನು ಪಡೆಯುವ 100 ಕೋಟಿ ರೂಪಾಯಿ ಸಂಭಾವನೆಗಿಂತ ಜನರಿಗೆ ನಾನು ಮಾಡುತ್ತಿರುವ ಸಹಾಯ ನನಗೆ ದೊಡ್ಡ ಮಟ್ಟಿನ ಸಂತೋಷ ನೀಡುತ್ತದೆ" ಎಂದು ಸೋನು ಸೂದ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸದ್ಯಕ್ಕೆ ಸೋನು ಸೂದ್ ಅಭಿನಯದ ಎರಡು ಸಿನಿಮಾಗಳ ಚಿತ್ರೀಕರಣ ಮುಂದಿನ ವಾರದಿಂದ ಆರಂಭವಾಗಲಿದೆ. ಪಾತ್ರಗಳ ಆಯ್ಕೆ ವಿಚಾರದಲ್ಲಿ ಸೋನು ಸೂದ್ ಮೊದಲಿಗಿಂತಲೂ ಈಗ ಬಹಳ ಚೂಸಿಯಾಗಿದ್ದಾರಂತೆ.