ಹೈದರಾಬಾದ್ (ತೆಲಂಗಾಣ):ಮುಂದಿನ ವರ್ಷ ಜನವರಿ 6 ರಂದು ಬೆಳ್ಳಿ ಪರದೆಯ ಮೇಲೆ ಬಿಡುಗಡೆಯಾಗಲು ಸಿದ್ಧವಾಗಿದ್ದ ನಟಿ ಆಲಿಯಾ ಭಟ್ ಅವರ ಬಹು ನಿರೀಕ್ಷಿತ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’ (Gangubai Kathiawadi) ಈಗ ಒಂದು ತಿಂಗಳ ಕಾಲ ಮುಂದೂಡಲಾಗಿದೆ.
ಮುಂದಿನ ವರ್ಷ ಜನವರಿ 7 ರಂದು ಬಿಡುಗಡೆಯಾಗಲಿರುವ ಎಸ್‌ಎಸ್ ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ಚಿತ್ರ ಆರ್ಆರ್ಆರ್ (RRR) ವಿರುದ್ಧ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರ ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ.
ಬನ್ಸಾಲಿ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಗಂಗೂಬಾಯಿ ಕಥಯಾವಾಡಿ ಏಳಿಗೆ, ಶಕ್ತಿ, ಧೈರ್ಯ ಮತ್ತು ನಿರ್ಭಯತೆ ಹೋರಾಟವನ್ನು ಮುಂದಿನ ವರ್ಷ ಫೆಬ್ರವರಿ 18ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಎಂದು ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.
ಖ್ಯಾತ ಲೇಖಕ ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ (Mafia Queens of Mumbai) ಪುಸ್ತಕದ ಕಥೆಯನ್ನು ಬನ್ಸಾಲಿ ಪ್ರೊಡಕ್ಷನ್ಸ್ ಚಿತ್ರೀಕರಿಸಿದೆ. ಈ ಚಿತ್ರ 1960ರ ದಶಕದಲ್ಲಿ ಕಾಮತಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮೇಡಮ್‌ಗಳಲ್ಲಿ ಒಬ್ಬರಾದ ಗಂಗೂಬಾಯಿ ಅವರ ಬಯೋಪಿಕ್ ಆಗಿದ್ದು, ಗಂಗೂಬಾಯಿ ಅವರ ಪಾತ್ರದಲ್ಲಿ ಆಲಿಯಾ ಭಟ್ ಮಿಂಚಲಿದ್ದಾರೆ.
ನಿರ್ಮಾಪಕರು ಈ ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಾಯಿಸುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 11, 2020 ರಂದು ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಲಾಗಿತ್ತು. ಕೊರೊನಾ ವೈರಸ್ (coronavirus) ಸಾಂಕ್ರಾಮಿಕ ರೋಗದಿಂದಾಗಿ ಈ ಚಿತ್ರವನ್ನು ಮತ್ತೆ ಮುಂದೆ ತಳ್ಳಲಾಯಿತು.
ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಚಿತ್ರದಲ್ಲಿ ಸೀಮಾ ಪಹ್ವಾ ಕೂಡ ನಟಿಸಿದ್ದಾರೆ. ಅಜಯ್ ದೇವಗನ್ ಮತ್ತು ಹುಮಾ ಖುರೇಷಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಜಯಂತಿಲಾಲ್ ಗಡ ಅವರ ಪೆನ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಬನ್ಸಾಲಿ ಈ ಚಿತ್ರವನ್ನು ಸಹ - ನಿರ್ಮಾಣ ಮಾಡುತ್ತಿದ್ದಾರೆ.