ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು, ಆದರೆ ತೂಕ ಕಳೆದುಕೊಳ್ಳಲು ನಾನಾ ಕಸರತ್ತು ಮಾಡಲೇಬೇಕು. 2-3 ಕಿಲೋ ಆದರೆ ಒಂದೆರಡು ತಿಂಗಳು ವರ್ಕೌಟ್ ಮಾಡಿ ತೂಕ ಕಳೆದುಕೊಳ್ಳಬಹುದು. ಆದರೆ 98 ಕಿಲೋ ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ ಬಿಡಿ. ಬಾಲಿವುಡ್ ನಟ ಗಣೇಶ್ ಆಚಾರ್ಯ ಇದೀಗ ಬರೋಬ್ಬರಿ 98 ಕಿಲೋ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ. ಗಣೇಶ್ ಆಚಾರ್ಯ ಹೊಸ ಫೋಟೋ ನೋಡಿದವರು ವಾಹ್ ಗಣೇಶ್..ಎನ್ನುತ್ತಿದ್ದಾರೆ.
ಬಾಲಿವುಡ್ನಲ್ಲಿ ಆಲಿಯಾ ಭಟ್, ಕರೀನಾ ಕಪೂರ್, ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ, ಸಾರಾ ಅಲಿ ಖಾನ್, ಗಾಯಕ ಅದ್ನಾನ್ ಸಾಮಿ ಸೇರಿದಂತೆ ಅನೇಕ ನಟ-ನಟಿಯರು ಇದಕ್ಕೂ ಮುನ್ನ ಬಹಳ ದಪ್ಪ ಇದ್ದರು. ಆದರೆ ನಂತರ ಆರೋಗ್ಯ ಹಾಗೂ ಕರಿಯರ್ ದೃಷ್ಟಿಯಿಂದ ಇವರೆಲ್ಲಾ ಸಖತ್ ವರ್ಕೌಟ್ ಮಾಡಿ ತೂಕ ಇಳಿಸಿದ್ದರು. ಇದೀಗ ಆ ಗುಂಪಿಗೆ ಗಣೇಶ್ ಆಚಾರ್ಯ ಕೂಡಾ ಸೇರಿದ್ದಾರೆ. ಗಣೇಶ್ ಆಚಾರ್ಯ ಸುಮಾರು 7 ವರ್ಷಗಳ ಹಿಂದಿನಿಂದ ವರ್ಕೌಟ್ ಆರಂಭಿಸಿದ್ದಾರೆ. 2 ವರ್ಷಗಳ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಣೇಶ್ ಆಚಾರ್ಯ, ತೂಕ ಇಳಿಸುವುದು ಬಹಳ ಕಷ್ಟದ ಕೆಲಸ, ಬಹಳ ವರ್ಷಗಳಿಂದ ನಾನು ತೂಕ ಇಳಿಸಲು ಪ್ರಯತ್ನಿಸುತ್ತಲೇ ಇದ್ದೇನೆ. 2015 ರಲ್ಲಿ ಚಿತ್ರವೊಂದಕ್ಕಾಗಿ ಸುಮಾರು 30 ಕಿಲೋ ತೂಕ ಇಳಿಸಿದ್ದೆ ಎಂದು ಹೇಳಿದ್ದಾರೆ.