ಮುಂಬೈ: ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಈಗಾಗಲೇ ತನಿಖೆ ಎದುರಿಸುತ್ತಿರುವ ರಿಯಾ ಸದ್ಯ ತಮ್ಮ ಸಿನಿಮಾ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ.
ಇದೀಗ ಲೊಮ್ ಹರ್ಷ ನಿರ್ದೇಶನದ ಮುಂಬರುವ ಚಿತ್ರದಿಂದ ರಿಯಾ ಚಕ್ರವರ್ತಿಯನ್ನು ಕೈಬಿಟ್ಟಿದ್ದಾರೆ. ಸುಶಾಂತ್ ಸಾವಿನಲ್ಲಿ ಆಕೆಯ ಕೈವಾಡವಿದೆ ಎಂಬ ಆರೋಪ ಇರುವುದರಿಂದ ಸಿನಿಮಾ ಅವಕಾಶದಿಂದ ವಂಚಿತರಾಗಿದ್ದಾರೆ.
ಸುಶಾಂತ್ ಸಾವಿನ ಬಳಿಕವೂ ಸಿನಿಮಾದಲ್ಲಿ ರಿಯಾಗೆ ಅವಕಾಶ ನೀಡುವುದರಿಂದ ಸುಶಾಂತ್ ಅಭಿಮಾನಿಗಳಿಗೆ ನೋವಾಗಬಹುದು ಎಂಬ ಉದ್ದೇಶದಿಂದ ನಿರ್ದೇಶಕ ಈ ನಿಲುವಿಗೆ ಬಂದಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ದೇಶಕ ಹರ್ಷ, ‘ಇದು ನನ್ನ ಎರಡನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ನಿರ್ಮಾಪಕರು ಹಾಗೂ ಕ್ಯಾಸ್ಟಿಂಗ್ ನಿರ್ದೇಶಕರ ಅಭಿಮತದಂತೆ ರಿಯಾ ಚಕ್ರವರ್ತಿಯನ್ನು ಲೀಡ್ ರೋಲ್ಗಾಗಿ ಆಯ್ಕೆ ಮಾಡಲಾಗಿತ್ತು. ಚಿತ್ರದ ಪ್ರಿ ಪ್ರೊಡಕ್ಷನ್ ಕಾರ್ಯಗಳು ಈಗಾಗಲೇ ಮುಕ್ತಾಯವಾಗಿದ್ದು, ಚಿತ್ರೀಕರಣಕ್ಕೆ ತಂಡ ಯೋಜನೆ ಹಾಕಿಕೊಂಡಿದೆ. 2018ರಲ್ಲೇ ಚಿತ್ರದ ಬಗ್ಗೆ ಯೋಜನೆ ಆರಂಭವಾಗಿತ್ತು. ಬಳಿಕ ಈ ವರ್ಷದ ಆರಂಭದಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ, ಕೊರೊನಾದಿಂದ ಚಿತ್ರೀಕರಣ ಮುಂದಕ್ಕೆ ಹಾಕಲಾಗಿತ್ತು. ಬಳಿಕ ಸುಶಾಂತ್ ಸಿಂಗ್ ಸಾವಿನ ಕಾರಣ ಹಾಗೂ ಪ್ರಸ್ತುತ ಪರಿಸ್ಥಿಯಲ್ಲಿ ರಿಯಾ ಅವರನ್ನು ಸಿನಿಮಾದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಇನ್ನೂ ಮುಂದುವರಿದು, ‘ನಮ್ಮ ದೇಶದಲ್ಲಿ ಭಾವಜೀವಿಗಳು ಮತ್ತು ಧಾರ್ಮಿಕ ಮೌಲ್ಯ ಹೊಂದಿರುವರನ್ನೇ ತುಂಬಿಕೊಂಡಿದ್ದೇವೆ. ನಾವೀಗ ಸುಶಾಂತ್ ಬಗೆಗೆ ಜನರು ಹೊಂದಿರುವ ಭಾವನೆಯನ್ನು ಗೌರವಿಸಬೇಕಿದೆ. ನಾವು ಯಾರ ಭಾವನೆಗಳಿಗೂ ಧಕ್ಕೆ ತರುವ ಕೆಲಸ ಮಾಡಬಾರದು, ಈ ಎಲ್ಲ ಕಾರಣಕ್ಕಾಗಿ ನಾವೀಗ ರಿಯಾ ಚಕ್ರವರ್ತಿಯನ್ನು ಸಿನಿಮಾದಿಂದ ಕೈಬಿಟ್ಟಿದ್ದೇವೆ’ ಎಂದಿದ್ದಾರೆ.
‘ಈ ಸಿನಿಮಾವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದ್ದು, ರಿಯಾ ಈ ಚಿತ್ರದಲ್ಲಿ ಡಾಕ್ಟರ್ ಆಗಿಯೂ ಹಾಗೂ ಚಿತ್ರದ ನಾಯಕಿ ಪಾತ್ರವನ್ನೂ ನಿರ್ವಹಿಸಬೇಕಾಗಿತ್ತು’ ಎಂದು ಸಿನಿಮಾದಲ್ಲಿ ರಿಯಾ ಪತ್ರದ ಕುರಿತಂತೆ ಮಾಹಿತಿ ನೀಡಿದ್ದಾರೆ.
ಇದಲ್ಲದೇ ‘ನಾನು ಈ ಸಿನಿಮಾದ ಪಾತ್ರದ ಕುರಿತಂತೆ ರಿಯಾ ಜೊತೆಯಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ. ನಮ್ಮ ತಂಡ ಈ ಪಾತ್ರಕ್ಕೆ ಸೂಕ್ತ ನಟಿ ಹುಡುಕಾಟ ನಡೆಸಿ ಪಟ್ಟಿ ಮಾಡಿದಾಗ ರಿಯಾ ಹೆಸರು ಸಹ ಅದರಲ್ಲಿತ್ತು. ಬಳಿಕ ಈ ಎಲ್ಲ ಪ್ರರಕಣ ನಡೆದಾಗ ಆಕೆಯ ಹೆಸರನ್ನು ಕೈಬಿಡಲು ನಿರ್ಧರಿಸಿದ್ದೆವು’ ಎಂದಿದ್ದಾರೆ.