ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಅಭಿಮಾನಿಗಳು ಟ್ವಿಟ್ಟರ್ನಲ್ಲಿ #BreakTheSilenceForSushant ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಅಭಿಮಾನಿಗಳ ಪ್ರಕಾರ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನು ಉದ್ದೇಶಪೂರ್ವಕವಾಗಿ ಯಾರೋ ಕೊಲೆ ಮಾಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಸುಶಾಂತ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೈದ್ಯರು ಪೋಸ್ಟ್ ಮಾರ್ಟ್ಂ ವರದಿ ನೀಡಿದ್ದರೂ ಕೂಡಾ ಅಭಿಮಾನಿಗಳು ಈ ವರದಿಯನ್ನು ಒಪ್ಪಲು ಸಿದ್ಧರಿಲ್ಲ.
'ನಾವು ಸುಶಾಂತ್ ಸಾವಿನ ಹಿಂದಿರುವ ಸತ್ಯವನ್ನು ಅರಿಯಲೇಬೇಕು ಆದ್ದರಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು' ಎಂದು ಒಬ್ಬ ಅಭಿಮಾನಿ ಕಮೆಂಟ್ ಮಾಡಿದ್ದರೆ, 'ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಇದು ಪೂರ್ವಯೋಜಿತ ಅಪರಾಧ. ಸುಶಾಂತ್ ಸಾವಿಗೆ ನ್ಯಾಯ ದೊರೆಯುವವರೆಗೂ ನಾವು ಹೋರಾಟ ಮಾಡುತ್ತೇವೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲೇಬೇಕು' ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
'ಸುಶಾಂತ್ ಸಾವಿಗೆ ನ್ಯಾಯ ಒದಗಿಸುವ ಸಂಬಂಧ ನಿಮ್ಮ ಕೈಲಾದಷ್ಟು ಹೋರಾಡಿ. ಸುಶಾಂತ್ ತಾನು ನಂಬಿದ್ದ ಗೆಳೆಯರಿಂದಲೇ ಕೊಲೆಯಾಗಿದ್ದಾರೆ' ಎಂದು ಒಬ್ಬರು ನೆಟಿಜನ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, 'ಸುಶಾಂತ್ ತಮ್ಮ ಕರಿಯರ್ನಲ್ಲಿ ಬಹಳ ನೊಂದಿದ್ದಾರೆ. ಆತನಿಗಾಗಿ ನಾವಿದ್ದೇವೆ. ಈ ಸಂಬಂಧ ನಿಮ್ಮ ಧ್ವನಿ ಎತ್ತಿ. ಈ ವಿಚಾರದಲ್ಲಿ ನಮಗೆ ರಾಜಕೀಯ ಬೇಡ, ನ್ಯಾಯ ಬೇಕು. ಯಾರೋ ಮಾಡಿದ ತಪ್ಪಿಗೆ ಮತ್ತಾರೋ ಬಲಿಯಾಗುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ಧಾರೆ.
ಸ್ಟಾರ್ ನಟರ ಮಕ್ಕಳ ಸಿನಿಮಾಗಳನ್ನು ನಾವು ಬಹಿಷ್ಕರಿಸುತ್ತಿರುವುದಾಗಿ ಕೂಡಾ ಸುಶಾಂತ್ ಅಭಿಮಾನಿಗಳು ಕರೆ ನೀಡಿದ್ದಾರೆ. 'ಇನ್ನುಮುಂದೆ ನಾವು ಸ್ವಜನಪಕ್ಷಪಾತ ಮಾಡುವ ಸ್ಟಾರ್ ಮಕ್ಕಳ ಸಿನಿಮಾಗಳನ್ನು ನೋಡದೆ ಇರುವುದಾಗಿ ನಾವೆಲ್ಲರೂ ಈ ಮೂಲಕ ಪ್ರತಿಜ್ಞೆ ಮಾಡೋಣ. ಈ ಮೂಲಕವಾದರೂ ನಾವು ಸುಶಾಂತ್ ಸಾವಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇವೆ. ನಮ್ಮ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ' ಎಂದು ಸುಶಾಂತ್ ಅಭಿಮಾನಿಗಳು ಟ್ವಿಟ್ಟರ್ನಲ್ಲಿ #BreakTheSilenceForSushant ಹೆಸರಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ನಡುವೆ ಸುಶಾಂತ್ ಸೋದರ ಸಂಬಂಧಿ ವಿಶಾಲ್ ಕೀರ್ತಿ ಎಂಬುವವರು ಬಾಲಿವುಡ್ ಚಿತ್ರರಂಗದಲ್ಲಿ ಎಷ್ಟು ಸ್ವಜನಪಕ್ಷಪಾತ ಇದೆ ಎಂಬುದನ್ನು ಅಳೆಯಲು ರೂಪಿಸಲಾದ 'ನೆಪ್ಟೋಮೀಟರ್' ಎಂಬ ಮೊಬೈಲ್ ಆ್ಯಪ್ ಲಾಂಚ್ ಮಾಡಿದ್ದಾರೆ. ಇದರ ಹಿಂದೆ ಲಾಭದ ಉದ್ದೇಶವಿಲ್ಲ ಎಂದು ಕೀರ್ತಿ ಸ್ಪಷ್ಟಪಡಿಸಿದ್ದಾರೆ. ಈ ಆ್ಯಪನ್ನು ಕೀರ್ತಿ ಅವರ ಸಹೋದರ ಮಯೂರೇಶ್ ಕೃಷ್ಣ ಎಂಬುವವರು ಸಿದ್ಧಪಡಿಸಿದ್ದು ತಮ್ಮ ಟ್ವಿಟ್ಟರ್ನಲ್ಲಿ ಈ ಆ್ಯಪ್ ಬಗ್ಗೆ ವಿವರಣೆ ನೀಡಿದ್ದಾರೆ.
'ನೆಪ್ಟೋಮೀಟರ್' ಮೂಲಕ ಮೊದಲ ಬಾರಿಗೆ ಆಲಿಯಾ ಭಟ್ ಅವರ 'ಸಡಕ್ 2' ಚಿತ್ರಕ್ಕೆ ರೇಟ್ ನೀಡಲಾಗಿದೆ. ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸಿದ್ದು ಮುಖೇಶ್ ಭಟ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಆಲಿಯಾ ಜೊತೆ ಅಕ್ಕ ಪೂಜಾ ಭಟ್ ಕೂಡಾ ನಟಿಸಿದ್ದಾರೆ. 'ನೆಪ್ಟೋಮೀಟರ್' ಪ್ರಕಾರ ಸಿನಿಮಾ ಶೇಕಡಾ 98 ರಷ್ಟು ಸ್ವಜನಪಕ್ಷಪಾತದಿಂದ ಕೂಡಿದೆ ಎನ್ನಲಾಗಿದೆ.