ನವದೆಹಲಿ:ಪಕ್ಷಪಾತವಿಲ್ಲದೆ ತಮ್ಮ ಸಹೋದರನ ಸಾವಿನ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸತ್ಯ ಹೊರಬರುವುದನ್ನು ಬಿಟ್ಟು ಬೇರೇನನ್ನೂ ನಿರೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಶ್ವೇತಾ ಸಿಂಗ್, ಸಿಬಿಐ ವಿಚಾರಣೆಗೆ ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಪಕ್ಷಪಾತವಿಲ್ಲದ ತನಿಖೆಗೆ ಒತ್ತಾಯಿಸುವುದು ನಮ್ಮ ಹಕ್ಕು, ಸತ್ಯ ಬೆಳಕಿಗೆ ಬರುವುದನ್ನು ಬಿಟ್ಟು ಬೇರಾವ ನಿರೀಕ್ಷೆಗಳೂ ಇಲ್ಲ. ಸುಶಾಂತ್ಗಾಗಿ ಎಲ್ಲರೂ ಒಟ್ಟಾಗಿ ನಿಂತು ಸಿಬಿಐ ವಿಚಾರಣೆಗೆ ಒತ್ತಾಯಿಸಬೇಕೆಂದು ನಾನು ವಿನಂತಿಸುತ್ತೇನೆ. ಸುಶಾಂತ್ ಸಾವಿಗೆ ನ್ಯಾಯ ಒದಗಿಸದಿದ್ದರೆ ನಾವು ಎಂದಿಗೂ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.