ಮುಂಬೈ: ನನ್ನ ತಾಯಿ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯ ಸಂಬಂಧ ಹರಡುತ್ತಿರುವ ಗಾಳಿಸುದ್ದಿಗಳನ್ನು ನಂಬಬೇಡಿ. ಅದು ಫೇಕ್ ನ್ಯೂಸ್ ಎಂದು ತನ್ನ ತಾಯಿ ಆರೋಗ್ಯದ ಬಗ್ಗೆ ಮಗಳು ಇಶಾ ಡಿಯೋಲ್ ಸ್ಪಷ್ಟನೆ ನೀಡಿದ್ದಾರೆ.
'ಸುಳ್ಳು ಸುದ್ದಿ ನಂಬಬೇಡಿ; ಹೇಮಾ ಮಾಲಿನಿ ಆರೋಗ್ಯವಾಗಿದ್ದಾರೆ' - ಬಾಲಿವುಡ್ ಸುದ್ದಿ
ಬಾಲಿವುಡ್ ಹಿರಿಯ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಆರೋಗ್ಯ ಸ್ಥಿರವಾಗಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈ ಬಗ್ಗೆ ಖುದ್ದು ಹೇಮಾ ಮಾಲಿನಿ ಹಾಗೂ ಅವರ ಮಗಳು ಇಶಾ ಡಿಯೋಲ್, ಹೇಮಾ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಶಾ, ನನ್ನ ತಾಯಿ ಆರೋಗ್ಯವಾಗಿದ್ದಾರೆ. ಅವರ ಅನಾರೋಗ್ಯಕ್ಕೆ ಸಂಬಂಧಿಸಿದ ಸುದ್ದಿ ಸುಳ್ಳು. ದಯವಿಟ್ಟು ಅಂತಹ ವದಂತಿಗಳಿಗೆ ಪ್ರತಿಕ್ರಿಯಿಸಬೇಡಿ. ಅವರ ಬಗೆಗಿನ ಪ್ರೀತಿ ಮತ್ತು ಕಾಳಜಿಗೆ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ತಮ್ಮ ಆರೋಗ್ಯ ಸ್ಥಿರವಾಗಿದೆ ಎಂದು ಖುದ್ದು ವಿಡಿಯೋ ಮಾಡಿ ಟ್ವಿಟರ್ನಲ್ಲಿ ಹರಿಬಿಟ್ಟಿರುವ ಹೇಮಾ ಮಾಲಿನಿ, ನನ್ನ ಆರೋಗ್ಯ ಸ್ಥಿರವಾಗಿಲ್ಲ. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನನಗೆ ಏನೂ ಆಗಿಲ್ಲ. ನಿಮ್ಮ ಮತ್ತು ಭಗವಂತನ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.