ನವದೆಹಲಿ :ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಚಿತ್ರ ದಿಲ್ ಬೆಚರಾ ಸಿನಿಮಾದ ಬಿಡುಗಡೆಗೂ ಮೊದಲು ಸಂಯೋಜಕ ಎ ಆರ್ ರಹಮಾನ್ ಮತ್ತು ಇತರ ಪ್ರಮುಖ ಗಾಯಕರು ದಿವಂಗತ ತಾರೆಗೆ ಹೃತ್ಪೂರ್ವಕ ಸಂಗೀತ ಗೌರವ ಸಲ್ಲಿಸಿದರು.
ಈ ಚಿತ್ರವು ಜೂನ್ 14 ರಂದು ಮುಂಬೈನ ನಿವಾಸದಲ್ಲಿ ಶವವಾಗಿ ಪತ್ತೆಯಾದ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಸಿನಿಮಾವಾಗಿದ್ದು, ಎಷ್ಟೋ ಮಂದಿ ಸಿನಿಮಾ ಪ್ರಿಯರ, ಸುಶಾಂತ್ ಅಭಿಮಾನಿಗಳ ಹೃದಯದಲ್ಲಿ ಈಗಾಗಲೇ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದೆ.
ಸುಶಾಂತ್ ಸಾವಿನ ನಂತರ ಅನೇಕರು ದಿವಂಗತ ನಟನಿಗೆ ಗೌರವ ಸಲ್ಲಿಸಲು ತಮ್ಮದೇ ಆದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ದಿಲ್ ಬೆಚಾರ ಸಿನಿಮಾದ 9 ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಮತ್ತು ಕಂಠದಾನ ಮಾಡಿರುವ ಶ್ರೇಯಾ ಘೋಶಾಲ್, ಸುನಿಧಿ ಚೌಹಾಣ್, ಅರಿಜಿತ್ ಸಿಂಗ್, ಮೋಹಿತ್ ಚೌಹಾಣ್, ಜೊನಿತಾ ಗಾಂಧಿ ಮತ್ತು ಇತರರು ನಟನಿಗೆ ವಿಶೇಷ ಸಂಗೀತ ಗೌರವ ಸಲ್ಲಿಸಿದ್ದಾರೆ.
ಅಧಿಕೃತ ಗೌರವ ವಿಡಿಯೋವನ್ನು ಡಿಸ್ನಿ+ ಹಾಟ್‌ಸ್ಟಾರ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, "ಇದು ನಮ್ಮ ಹೃದಯದಲ್ಲಿ ಎಂದೆಂದಿಗೂ ಉಳಿಯುತ್ತದೆ. ನಮ್ಮ ಪ್ರೀತಿಯ # ಸುಶಾಂತ್‌ಸಿಂಗ್ ರಾಜ್ಪೂತ್ಗೆ ಸಂಗೀತಗೌರವ" ಎಂದು ಬರೆಯಲಾಗಿದೆ.