ಭಾನುವಾರ ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಅಟ್ಟಹಾಸಕ್ಕೆ ಐವರು ಯೋಧರು ಹುತಾತ್ಮರಾಗಿದ್ದಾರೆ. ದಾಳಿಗೆ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ ಇಬ್ಬರು ಭಯೋತ್ಪಾಕರನ್ನು ಹೊಡೆದುರುಳಿಸಿತ್ತು. ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಿನಿತಾರೆಯರು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಗೌರವ ವಂದನೆ ಅರ್ಪಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ 'ಹುತಾತ್ಮರಾದ ಯೋಧರ ಚಿತ್ರಗಳನ್ನು ನೋಡಿ ಮನಸ್ಸು ಬಹಳ ಭಾರವಾಯ್ತು. ನಮಗಾಗಿ ತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಆ ದೇವರು ದು:ಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ. ನಿಮಗೆ ನಮ್ಮ ವಂದನೆ, ಜೈಹಿಂದ್' ಎಂದು ಟ್ವೀಟ್ ಮಾಡಿದ್ಧಾರೆ.
ನಟ ಆಯುಷ್ಮಾನ್ ಖುರಾನ ಹುತಾತ್ಮ ಯೋಧರ ಬಗ್ಗೆ ಒಂದು ಕವಿತೆ ಬರೆದು ಜೈಹಿಂದ್, ಜೈ ಜವಾನ್ ಎಂದು ಟ್ವೀಟ್ ಮಾಡಿದರೆ, ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡಾ ಟ್ವೀಟ್ ಮಾಡಿ 'ಇದು ನಮ್ಮ ದೇಶಕ್ಕೆ ಕರಾಳ ಸಮಯ, ನಮಗಾಗಿ ಗಡಿಯಲ್ಲಿ ಹೋರಾಡುತ್ತಾ ತ್ಯಾಗ ಮಾಡಿದ ಸೈನಿಕರ ಧೈರ್ಯಕ್ಕೆ ಸರಿಸಾಟಿಯಿಲ್ಲ. ಹುತಾತ್ಮರಾದ ಯೋಧರಿಗೆ ನಾನು ಮೌನಾಚರಣೆ ಮೂಲಕ ಗೌರವ ಸಲ್ಲಿಸುತ್ತೇನೆ' ಎಂದಿದ್ದಾರೆ.
ನಟಿ ಅನುಷ್ಕಾ ಶರ್ಮ 'ದೇಶದ ಸೈನಿಕರು ದೇಹ ಮಾಂಸ, ರಕ್ತ ಹಾಗೂ ಭಾವನೆಗಳಿಂದ ಮಾಡಲ್ಪಟ್ಟಿದೆ. ಸೈನಿಕರ ಕುಟುಂಬಕ್ಕೆ ಅವರು ಧರಿಸಿದ ಸಮವಸ್ತ್ರದಷ್ಟೇ ಪ್ರೀತಿ, ಗೌರವ ಸಲ್ಲಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ. ನಟಿ, ಸಂಸದೆ ಹೇಮಮಾಲಿನಿ ಕೂಡಾ ಹುತಾತ್ಮ ಸೈನಿಕರಿಗೆ ಗೌರವ ಸೂಚಿಸಿದ್ದಾರೆ. ಇವರೊಂದಿಗೆ ರಣದೀಪ್ ಹುಡಾ, ಗಾಯಕ ಅಂಕಿತ್ ತಿವಾರಿ, ನಿರ್ದೇಶಕ-ನಿರ್ಮಾಪಕ ಒನಿರ್, ಕಿರುತೆರೆ ಕಲಾವಿದ ನಿತೀಶ್ ಭಾರಧ್ವಾಜ್, ನಿರ್ಮಾಪಕ ಅಶೋಕ್ ಪಂಡಿತ್ ಹಾಗೂ ಇನ್ನಿತರರು ಹುತಾತ್ಮ ಯೋಧರನ್ನು ನೆನೆದಿದ್ದಾರೆ.
ಭಾನುವಾರ ಬೆಳಗ್ಗೆ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿ ಐವರು ಹುತಾತ್ಮರಾಗಿದ್ದರು.