2016 ರಲ್ಲಿ ಬಿಡುಗಡೆಯಾದ ಅಮೀರ್ ಖಾನ್ ನಟನೆಯ 'ದಂಗಲ್' ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಹಣ ಬಾಚಿಕೊಂಡ ಸಿನಿಮಾಗಳಲ್ಲಿ ಒಂದು. ಖ್ಯಾತ ಕುಸ್ತಿಪಟು ಗೀತಾ ಫೊಗಟ್ ಜೀವನಚರಿತ್ರೆ ಕಥೆಯನ್ನೊಳಗೊಂಡ ಸಿನಿಮಾಗೆ ಪ್ರಶಸ್ತಿ ಕೂಡಾ ಲಭಿಸಿತ್ತು.
ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಜೈರಾ ವಾಸಿಂ ಸಿನಿಮಾದಲ್ಲಿ ಗೀತಾ ಪಾತ್ರ ಮಾಡಿದ್ದ ಜಮ್ಮು ಕಾಶ್ಮೀರ್ ಪ್ರಾಂತ್ಯಕ್ಕೆ ಸೇರಿದ್ದ ಜೈರಾ ವಾಸಿಂ ಕೂಡಾ ಆ ಸಿನಿಮಾದಿಂದ ಸ್ಟಾರ್ಡಮ್ ಗಿಟ್ಟಿಸಿಕೊಂಡಿದ್ದರು. 'ದಂಗಲ್'ನಿಂದ ತನ್ನ ಸಿನಿಮಾ ಕರಿಯರ್ ಆರಂಭಿಸಿದ್ದ ಜೈರಾ ನಂತರ 'ಸೀಕ್ರೇಟ್ ಸೂಪರ್ಸ್ಟಾರ್' 'ದಿ ಸ್ಕೈ ಇಸ್ ಪಿಂಕ್' ಸೇರಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದರು. 'ದಂಗಲ್' ಸಿನಿಮಾ ನಟನೆಗಾಗಿ ಜೈರಾಗೆ ರಾಷ್ಟ್ರಪಶಸ್ತಿ ಕೂಡಾ ಲಭಿಸಿತ್ತು. 5 ವರ್ಷಗಳ ತಮ್ಮ ಸಿನಿಪಯಣದ ನಂತರ ಇದೀಗ ಜೈರಾ ತನ್ನ ಸಿನಿಕರಿಯರ್ಗೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಕಾರಣ ಆಕೆಯ ಧರ್ಮ. ಜೈರಾ ಕಾಶ್ಮೀರಿ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ ಯುವತಿಯಾಗಿದ್ದು ಆಕೆ ದಂಗಲ್ನಲ್ಲಿ ನಟಿಸಿದ್ದಾಗಿನಿಂದ ಆಕೆಗೆ ಬೆದರಿಕೆ ಕರೆಗಳು ಬರುತ್ತಲೇ ಇತ್ತು ಎನ್ನಲಾಗಿದೆ.
'ದಂಗಲ್'ನಲ್ಲಿ ಜೈರಾ ಹುಡುಗರಂತೆ ಹೇರ್ಸ್ಟೈಲ್ ಮಾಡಿಸಿದ್ದನ್ನು ಕೆಲವೊಂದು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದವು. 2017 ರಲ್ಲಿ ಜಮ್ಮು ಕಾಶ್ಮೀರ್ ಮುಖ್ಯಮಂತ್ರಿ ಮೆಹಬೂಬ ಮಫ್ತಿ ಅವರನ್ನು ಜೈರಾ ಭೇಟಿ ಮಾಡಿದ್ದರು. ಇವರಿಬ್ಬರ ಭೇಟಿಯ ನ್ಯೂಸ್ ಹಾಗೂ ಫೋಟೋಗಳು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದಾದ ನಂತರ ಜೈರಾಗೆ ಬೆದರಿಕೆ ಕರೆಗಳು ಕೂಡಾ ಬರಲಾರಂಭಿಸಿದವು. ಜೈರಾ 'ಕಾಶ್ಮೀರಿ ರೋಲ್ ಮಾಡೆಲ್' ಎಂದು ಮೆಹಬೂಬ ಮಫ್ತಿ ಹೊಗಳಿದ್ದೇ ಇದಕ್ಕೆ ಕಾರಣ. ಇದಾದ ಕೆಲವು ದಿನಗಳಲ್ಲಿ ಜೈರಾ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರ ಸಂಬಂಧ ಆಕೆ ಈ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಇದೂ ಕೂಡಾ ಆಕೆಗೆ ತಲೆನೋವಾಗಿ ಪರಿಣಮಿಸಿತು. ಜೈರಾ ವಾಸಿಂ ಸಿನಿಮಾ ಕ್ಷೇತ್ರದಲ್ಲಿ ಮುಂದುವರೆಯಲು ಆಕೆಗೆ ಪ್ರತಿ ಬಾರಿ ಮುಸ್ಲಿಂ ಸಂಘಟನೆಗಳು ಅಡ್ಡಗಾಲು ಹಾಕುತ್ತಿದ್ದವು.
ತಾನು ಸಿನಿಮಾದಿಂದ ದೂರ ಉಳಿಯುತ್ತಿರುವುದಾಗಿ ಇದೀಗ ಜೈರಾ ವಾಸಿಂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. 'ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಇರಲು ನಾನು ಇಷ್ಟಪಡುವುದಿಲ್ಲ. ನಾನು ಬಾಲಿವುಡ್ಗೆ ಕಾಲಿಡುತ್ತಿದ್ದಂತೆ ಒಳ್ಳೆ ಹೆಸರು ಸಂಪಾದಿಸಿದೆ. ನನ್ನ ಪರಿಶ್ರಮದಿಂದ ನಾನು ಎಷ್ಟೋ ಯುವತಿಯರ ರೋಲ್ ಮಾಡೆಲ್ ಎನಿಸಿಕೊಂಡೆ. ಆದರೆ ನಾನು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಸಿನಿಮಾ ಕ್ಷೇತ್ರ ಹಾಗೂ ಯಶಸ್ಸಿನಿಂದ ನಾನು ನಿಜಕ್ಕೂ ಸಂತೋಷವಾಗಿಲ್ಲ' ಎಂದು ಬರೆದುಕೊಂಡಿದ್ದಾರೆ.