ನವದೆಹಲಿ: ಬಿಹಾರ ಸರ್ಕಾರದ ಉಲ್ಲೇಖದ ಮೇರೆಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಸಿಬಿಐ ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ, ಕ್ರಿಮಿನಲ್ ಪಿತೂರಿ, ಇತರ ಆರೋಪಗಳ ಜೊತೆ ಮೋಸಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿ ಬಿಹಾರ ಪೊಲೀಸರು ಸಲ್ಲಿಸಿರುವ ಎಫ್‌ಐಆರ್ ಅನ್ನು ಸಿಬಿಐ ಮರು ನೋಂದಾಯಿಸುವ ಸಾಧ್ಯತೆಯಿದೆ.
ಕಾರ್ಯವಿಧಾನದ ಪ್ರಕಾರ, ಕಾನೂನು ಮತ್ತು ನ್ಯಾಯವ್ಯಾಪ್ತಿಯ ಸಮಸ್ಯೆಗಳಿದ್ದಲ್ಲಿ ಉಲ್ಲೇಖವನ್ನು ಹಿಂದಿರುಗಿಸಲು ಸಿಬಿಐಗೆ ಸ್ವಾತಂತ್ರ್ಯವಿದೆ ಮತ್ತು ಹೆಚ್ಚಿನ ಸ್ಪಷ್ಟೀಕರಣವನ್ನು ಪಡೆಯಬಹುದು. ಆದರೆ ಮೂಲಗಳು, ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿವೆ.
ಮಹಾರಾಷ್ಟ್ರ ಸರ್ಕಾರದ ತೀವ್ರ ವಿರೋಧದಿಂದಾಗಿ ಬಿಹಾರ ಪೊಲೀಸರಿಗೆ ತನಿಖೆ ಮುಂದುವರಿಸಲು ಸಾಧ್ಯವಾಗಿಲ್ಲ ಎಂಬ ಆರೋಪದ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.
ಮುಂಬೈ ಪೊಲೀಸರು ಆಕ್ಸಿಡೆಂಟಲ್ ಡೆತ್ ರಿಪೋರ್ಟ್ (ಎಡಿಆರ್) ದಾಖಲಿಸಿದ್ದರು. ಮತ್ತು ಈ ಸಂಬಂಧ ತನಿಖೆಯನ್ನೂ ನಡೆಸುತ್ತಿದ್ದಾರೆ. ಈವರೆಗೆ ಮುಂಬೈ ಪೊಲೀಸರು ಸುಶಾಂತ್ ಸಹೋದರಿಯರು, ಗೆಳತಿ ರಿಯಾ ಚಕ್ರವರ್ತಿ, ಬಾಲಿವುಡ್ ನಿರ್ದೇಶಕರಾದ ಆದಿತ್ಯ ಚೋಪ್ರಾ, ಮಹೇಶ್ ಭಟ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ 56 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.