ಮುಂಬೈ: ಒಟ್ಟು ಒಂಭತ್ತು ಜನ ನಟಿಯರು ಬಣ್ಣ ಹಚ್ಚಿರುವ ಕಿರುಚಿತ್ರ "ದೇವಿ"ಯ ಸಣ್ಣ ಟ್ರೈಲರ್ನ್ನು ನಟಿ ಕಾಜೋಲ್ ಬಿಡುಗಡೆಗೊಳಿಸಿದ್ದು, ಚಿತ್ರದ ಪಾತ್ರಗಳ ಬಗ್ಗೆ ಪ್ರೇಕ್ಷರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.
ಕಿರು ಚಿತ್ರದ ಟ್ರೈಲರ್ ತುಣುಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, "9 ಕ್ರೂರಿ ಮಹಿಳೆಯರು, 9 ವಿಭಿನ್ನ ಹಿನ್ನೆಲೆಗಳು, 1 ಸಂಪೂರ್ಣ ರಿಯಾಲಿಟಿ. ಈ ಮಹಿಳೆಯರನ್ನು ಒಂದು ಕೋಣೆಯಲ್ಲಿ ಬಂಧಿಸಿಟ್ಟಾಗ ಏನಾಗುತ್ತದೆ ಎಂಬುದರ ಒಂದು ನೋಟ ಇಲ್ಲಿದೆ, ನಮ್ಮ ಕಿರುಚಿತ್ರಕ್ಕಾಗಿ, # ದೇವಿ ಮಾರ್ಚ್ 2 ರಂದು ಅಂತ ಬರೆದುಕೊಂಡಿದ್ದಾರೆ.
58 ಸೆಕೆಂಡಿನ ಈ ಸಣ್ಣ ಟ್ರೈಲರ್ನಲ್ಲಿ, ವಿಭಿನ್ನ ವಯಸ್ಸು, ವ್ಯಕ್ತಿತ್ವದ ಒಂಬತ್ತು ಮಹಿಳೆಯರನ್ನು ಒಂದು ಕೋಣೆಯಲ್ಲಿ ಬಂಧಿಸಿಡುವ ಕಾರಣವನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಇದು ಎಲ್ಲರ ಗುಣಲಕ್ಷಣಗಳ ಸೂಕ್ಷ್ಮ ವ್ಯತ್ಯಾಸಗಳನ್ನು ತೋರಿಸುತ್ತದೆ.
ಕೊಠಡಿಯಲ್ಲಿ ಬಂಧಿಯಾಗಿರುವ ಮಹಿಳೆಯರು ಒಬ್ಬರಿಗೊಬ್ಬರು ವಾಗ್ವಾದದಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಮಧ್ಯೆ ಮಧ್ಯಸ್ಥಿಕೆ ವಹಿಸಿ ಸಮಾಧಾನ ಪಡಿಸುವ ಪಾತ್ರದಲ್ಲಿ ಕಾಜೋಲ್ ಕಾಣಿಸಿಕೊಂಡಿದ್ದಾರೆ. "ದೇವಿ" ಕಿರುಚಿತ್ರದಲ್ಲಿ ಕಾಜೋಲ್ ಜೊತೆ ನೇಹಾ ಧುಪಿಯಾ, ನೀನಾ ಕುಲಕರ್ಣಿ, ಶ್ರುತಿ ಹಾಸನ್, ಮುಕ್ತಾ ಬಾರ್ವೆ, ಶಿವಾನಿ ರಘುವಂಶಿ, ಸಂಧ್ಯಾ ಮಾತ್ರೆ, ರಾಮ ಜೋಶಿ ಮತ್ತು ರಾಶಸ್ವಿನಿ ದಯಾಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.