ಸಿನಿಮಾ ನಟ-ನಟಿಯರು ಎಂದ ಮೇಲೆ ಅಲ್ಲಿ ಶ್ರೀಮಂತಿಕೆ ಇದ್ದೇ ಇರುತ್ತದೆ. ಅವರು ಧರಿಸುವ ಉಡುಪು, ಆಹಾರ ಪದ್ಧತಿ ಎಲ್ಲದರಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಆದರೆ ಅಲ್ಲೋ ಇಲ್ಲೋ ಕೆಲವರು ಮಾತ್ರ ಬಹಳ ಸರಳವಾಗಿರುತ್ತಾರೆ. ಇದಕ್ಕೆ ಉದಾಹರಣೆ ಈ ಪೋಟೋ. ಹೀಗೆ ಒಲೆ ಮುಂದೆ ಕುಳಿತು ರೊಟ್ಟಿ ಬೇಯಿಸುತ್ತಿರುವ ಈ ಮಹಿಳೆ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ತಾಯಿ.
ಫೋಟೋ ನೋಡಿದೊಡನೆ ಉತ್ತರ ಭಾರತದ ಸಾಮಾನ್ಯ ಮಹಿಳೆಯೊಬ್ಬರು ಅಡುಗೆ ಮಾಡುತ್ತಿದ್ದಾರೇನೋ ಎನ್ನಿಸುವುದು ಗ್ಯಾರಂಟಿ.ಈ ಫೋಟೋವನ್ನು ಕಂಗನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಇಂದು ಬೆಳಗ್ಗೆ ಎಲ್ಲರಿಗೂ ತಿಂಡಿ ಮಾಡಲು ಹೊರಟ ಅಮ್ಮ, ಅಡುಗೆ ಮನೆಯಲ್ಲಿ ಬಹಳ ಚಳಿ ಇದೆ. ಆದ್ದರಿಂದ ಇಂದು ಮನೆ ಹೊರಗೆ ಕುಳಿತು ಬಿಸಿಲಿನಲ್ಲಿ ಅಡುಗೆ ಮಾಡುತ್ತೇನೆ ಎಂದರು. ನನಗೂ ಇದರ ಬಗ್ಗೆ ಕುತೂಹಲ ಉಂಟಾಯಿತು. ಅಮ್ಮ ಹೀಗೆ ಒಲೆ ಹಚ್ಚಿ ರೊಟ್ಟಿ ಸುಡುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ. ಹೀಗೆ ಮಾಡಿದ ಅಡುಗೆ ರುಚಿ ಮುಂದೆ ಬೇರೆ ಯಾವ ರುಚಿಯೂ ಇಲ್ಲ ಬಿಡಿ, ನನ್ನ ಅಮ್ಮನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ" ಎಂದು ಕಂಗನಾ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.