ಪಾಕಿಸ್ತಾನ್ : ಪುಲ್ವಾಮಾ ದಾಳಿಯ ನಂತರ ಭಾರತ-ಪಾಕ್ ನಡುವಿನ ಸಂಬಂಧ ಹದಗೆಟ್ಟಿದ್ದು, ಇದು ಪಾಕ್ ಚಿತ್ರರಂಗದ ಮೇಲೆ ಭಾರೀ ಪರಿಣಾಮ ಬೀರಿದೆ.
ಫೆ. 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಪೋಷಿತ ಜೈಷೆ-ಎ-ಮೊಹಮ್ಮದ ಉಗ್ರಸಂಘಟನೆ ಕಾರ್ ಬಾಂಬ್ ದಾಳಿ ನಡೆಸಿ, 44 ಭಾರತೀಯ ಯೋಧರನ್ನು ಬಲಿಪಡೆಯಿತು. ಅಲ್ಲಿಂದ ಪಾಕ್ ವಿರುದ್ಧ ಭಾರತ ಸರ್ಕಾರ ಕೆಲವೊಂದಿಷ್ಟು ಕಟ್ಟುನಿಟ್ಟಿನ ಕ್ರಮಕೈಗೊಂಡು, ಎಲ್ಲ ರೀತಿಯಲ್ಲಿ ಪಾಕ್ ಹಣಿಯಲು ಮುಂದಾಗಿತ್ತು. ಇದರ ಭಾಗವಾಗಿ ಭಾರತದಲ್ಲಿ ಪಾಕ್ ಕಲಾವಿದರನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಜತೆಗೆ ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ನಟರು ಪಾಕ್ನಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡೋದಿಲ್ಲ ಎಂದು ದೃಢ ನಿರ್ಧಾರ ಪ್ರಕಟಿಸಿದರು.
ಅತ್ತ ಪಾಕ್ನಲ್ಲಿಯೂ ಇದೇ ಚಿತ್ರಣ ಕಂಡು ಬಂದಿದೆ. ಭಾರತದ ವಾಯುಸೇನೆ ಅಲ್ಲಿಯ ಬಾಲ್ಕೋಟ್ ಮೇಲೆ ದಾಳಿ ನಡೆಸಿದ ಹಿನ್ನೆಲೆ ಪಾಕ್ ಚಿತ್ರರಂಗದ ಭಾರತೀಯ ಚಿತ್ರಗಳನ್ನು ಬ್ಯಾನ್ ಮಾಡಿದೆ. ಮೊದಲಿನಿಂದಲೂ ಪಾಕಿಸ್ತಾನದಲ್ಲಿ ಬಾಲಿವುಡ್ ಚಿತ್ರಗಳಿಗೆ ಭಾರೀ ಬೇಡಿಕೆಯಿದೆ. ಶೇಕಡಾ 60 ರಷ್ಟು ನಮ್ಮ ಚಿತ್ರಗಳೇ ಅಲ್ಲಿಯ ಜನರನ್ನು ರಂಜಿಸುತ್ತಿದ್ದವು. ಅದರಲ್ಲೂ ಸಲ್ಮಾನ್, ಶಾರುಖ್ ಖಾನ್ ಅವರ ಚಿತ್ರಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದವು. ಆದರೆ, ಸದ್ಯ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಬಾಲಿವುಡ್ ಮೂವಿಗಳ ಮೇಲೆ ಅಲ್ಲಿಯ ಸರ್ಕಾರ ನಿಷೇಧ ಹೇರಿದೆ. ಇದಕ್ಕೆ ಪರ್ಯಾವಾಗಿ ತಮ್ಮ ಹಳೇ ಚಿತ್ರಗಳನ್ನೇ ಮರುಬಿಡುಗಡೆ ಮಾಡುವಂತೆ ಸೂಚಿಸಿದೆ.
ಇನ್ನು ಈಗಾಗಲೇ ನೋಡಿರುವ ಚಿತ್ರಗಳನ್ನು ನೋಡಲು ಅಲ್ಲಿಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲವಂತೆ. ಪರಿಣಾಮ ಸಿನಿರಸಿಕರನ್ನು ಸೆಳೆಯಲು ಮೂವಿ ಟಿಕೆಟ್ ಮೇಲೆ 40 ಪರ್ಸೆಂಟ್ ಆಫರ್ ಕೂಡ ನೀಡಲಾಗಿದೆ. ಅಷ್ಟಾದರೂ ಕೂಡ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆಯಂತೆ. ಇತ್ತ ಪಾಕ್ ಪ್ರೊಡ್ಯೂಸ್ ಮಾಡಿರುವ ಹಾಲಿವುಡ್ ಚಿತ್ರಗಳು ಕೊಂಚ ಮಟ್ಟಿಗೆ ಪಾಕ್ ಸಿನಿ ಪ್ರೇಮಿಗಳನ್ನು ಕೊಂಚ ರಂಚಿಸುತ್ತಿವೆ ಎನ್ನುತ್ತಾರೆ ಅಲ್ಲಿಯ ಜನ.