ಕೊರೊನಾ ಕಾರಣದಿಂದ ಪ್ರತಿ ಬಾರಿಯಂತೆ ಈ ಬಾರಿ ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸ್ಯಾಂಡಲ್ವುಡ್ ಸೆಲಬ್ರಿಟಿಗಳು 'ಇದೇ ನಮ್ಮ ಭಾರತ' ಹಾಡಿನ ಮೂಲಕ ರಾಜ್ಯದ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭ ಕೋರಿದ್ದಾರೆ.
ಬಾಲಿವುಡ್ ಸೆಲಬ್ರಿಟಿಗಳು ಕೂಡಾ ಈ ಬಾರಿ ಮನೆಯಿಂದಲೇ ದೇಶದ ಜನತೆಗೆ ಸೋಷಿಯಲ್ ಮೀಡಿಯಾ ಮುಖಾಂತರ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ್ದಾರೆ.
84 ವರ್ಷದ ಹಿರಿಯ ನಟ ಧಮೇಂದ್ರ ಡಿಯೋಲ್ ತಮ್ಮ ಟ್ವಿಟ್ಟರ್ನಲ್ಲಿ ಮೊಹಮದ್ ರಫಿ ಹಾಡಿರುವ 'ಕರ್ ಚಲೇ ಹಮ್ ಫಿದಾ' ಎಂಬ ದೇಶಭಕ್ತಿ ಗೀತೆಯ ತುಣುಕೊಂದನ್ನು ಷೇರ್ ಮಾಡುವ ಮೂಲಕ ಎಲ್ಲರಿಗೂ ಶುಭ ಕೋರಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಪೋಟೋದೊಂದಿಗೆ ವೈದ್ಯಕೀಯ ಸಿಬ್ಬಂದಿಗಳ ಫೊಟೋವನ್ನು ಜೊತೆ ಸೇರಿಸಿ ಸ್ವಾತಂತ್ರ್ಯ ದಿನೋತ್ಸವದ ಶುಭ ಕೋರಿದ್ದಾರೆ. ಅಲ್ಲದೆ ಕೊರೊನಾ ಸಮಯದಲ್ಲಿ ಸೆಣಸಾಡುತ್ತಿರುವ, ರೋಗಿಗಳಿಗೆ ತಮ್ಮ ಅಮೂಲ್ಯ ಸಮಯವನ್ನು ತ್ಯಾಗ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಹಿರಿಯ ಗಾಯಕಿ ಲತಾ ಮಂಗೇಶ್ಕರ್ 'ಸಾರೆ ಜಹಾ ಸೆ ಅಚ್ಚಾ' ಹಾಡಿನ ಲಿಂಕ್ ಹಂಚಿಕೊಳ್ಳುವ ಮೂಲಕ ದೇಶದ ಜನತೆಗೆ 74ನೇ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ್ದಾರೆ. ಹಿರಿಯ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ್ದಾರೆ.
ಇನ್ನು ಸಲ್ಮಾನ್ ಖಾನ್ ಕೂಡಾ , ಮೊಹಮ್ಮದ್ ಇಕ್ಬಾಲ್ ಅವರ ಖ್ಯಾತ ದೇಶಭಕ್ತಿ ಗೀತೆ 'ಸಾರೆ ಜಹಾ ಸೆ ಅಚ್ಚಾ' ಹಾಡಿನ ಮೂಲಕ ಶುಭ ಕೋರಿದ್ದಾರೆ. ಕ್ವೀನ್ ನಟಿ ಕಂಗನಾ ರಣಾವತ್, ಈ ವಿಶೇಷ ದಿನದಂದು ಗಿಡವನ್ನು ನೆಡುವ ಮೂಲಕ ದೇಶದ ಜನತೆಗೆ ಶುಭ ಕೋರಿದ್ದಾರೆ. ಪಿಂಕ್ ಬಣ್ಣದ ಸೀರೆಯೊಂದನ್ನು ಧರಿಸಿ ಹಣೆಗೆ ಬೊಟ್ಟು ಇಟ್ಟು ಅಪ್ಪಟ ಭಾರತೀಯ ನಾರಿಯಾಗಿ ಕಂಗನಾ ಬಹಳ ಅಂದವಾಗಿ ಕಾಣುತ್ತಿದ್ದಾರೆ.
ಇವರೊಂದಿಗೆ ಹಿರಿಯ ನಟ ಅನುಪಮ್ ಖೇರ್, ಖ್ಯಾತ ಸಂಗೀತ ನಿರ್ದೇಶಕ ಇಳಯ ರಾಜ, ಹೃತಿಕ್ ರೋಷನ್ ಹಾಗೂ ಇನ್ನಿತರರು ಕೂಡಾ ಶುಭ ಕೋರುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.