ಮುಂಬೈ: ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟಿ ಪ್ರಿಯಾಂಕಾ ಚೋಪ್ರಾಗೆ ಇಂದು 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಪ್ರಿಯಾಂಕಾ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದ್ದು, ತಮಿಳಿನ 'ತಮಿಳನ್' ಎಂಬ ಚಿತ್ರದ ಮೂಲಕ. 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಇವರಿಗೆ, 2016ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಒಲಿಯಿತು.
'ತಮಿಳನ್' ಸಿನಿಮಾದ ಬಳಿಕ 2003ರಲ್ಲಿ ತೆರೆ ಕಂಡ ಅನಿಲ್ ಶರ್ಮಾರವರ 'ದಿ ಹೀರೊ: ಲವ್ ಸ್ಟೋರಿ ಆಫ್ ಎ ಸ್ಪೈ'ನಲ್ಲಿ ಪ್ರಿಯಾಂಕಾ ನಟಿಸಿದರು. ಇದು ಅವರ ಚೊಚ್ಚಲ ಹಿಂದಿ ಚಲನಚಿತ್ರ. ಇನ್ನು ಅದೇ ವರ್ಷ ಬಿಡುಗಡೆಗೊಂಡ ಆಕೆ ನಟಿಸಿದ ಎರಡನೇ ಹಿಂದಿ ಸಿನಿಮಾ ರಾಜ್ ಕನ್ಬರ್‌ರವರ 'ಅಂದಾಜ್' ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದಿತ್ತು. ಅಷ್ಟೇ ಅಲ್ಲದೆ, ಈ ಸಿನಿಮಾದಲ್ಲಿನ ನಟನೆಗೆ ಫಿಲ್ಮ್‌ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ ಪಡೆದಿದ್ದಾರೆ. 2004ರಲ್ಲಿ ಅಬ್ಬಾಸ್-ಮಸ್ತಾನ್ ನಿರ್ದೇಶಿಸಿದ ಐತ್ರಾಜ್ ಚಲನಚಿತ್ರದಲ್ಲಿನ ನಟನೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಖಳನಾಯಕಿ ಪ್ರಶಸ್ತಿ ಗಳಿಸಿ, ಈ ಪ್ರಶಸ್ತಿ ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪ್ರಿಯಾಂಕಾ ಚೋಪ್ರಾರ ಮೇಣದ ಪ್ರತಿಮೆ ಅನೇಕ ಸಿನಿಮಾಗಳಲ್ಲಿ ನಟಿಸಿದ ಪಿಗ್ಗಿ ಬಾಲಿವುಡ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಿದರು. ಹಿಟ್ ಸಿನಿಮಾಗಳಲ್ಲಿ ನಟಿಸಿದ ಕೀರ್ತಿಗೆ ಭಾಜನರಾದರು. ಇನ್ನು 2008ರಲ್ಲಿ ಫ್ಯಾಷನ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ, ಮತ್ತೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು. ಸುಮಾರು 70ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಪ್ರಿಯಾಂಕ ಇದೀಗ ಅಮೆರಿಕನ್ ಪಾಪ್ ಸ್ಟಾರ್ ನಿಕ್ ಜೋನಸ್ರನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದಾರೆ.
ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಹಾಲಿವುಡ್ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವ ಪ್ರಿಯಾಂಕಾ ಕೆಲ ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ ತನ್ನದೇ ಆದ ಪ್ರೊಡಕ್ಷನ್ನಲ್ಲಿ ಸಿನಿಮಾ ಮಾಡಿದ್ದಾರೆ. ಇನ್ನು ಇವರು ಪತ್ರಿಕೆಗಳಲ್ಲಿ ಕಾಲಂ ಬರೆಯುವ ಹವ್ಯಾಸವನ್ನೂ ಹೊಂದಿದ್ದಾರೆ. ಪ್ರಿಯಾಂಕಾ ಮುಖ್ಯವಾಗಿ ತಯಾರಕರು ಮತ್ತು ಉತ್ಪನ್ನಗಳಿಗೆ ಪ್ರಸಿದ್ಧ ದೃಢಿಕೃತ ಪ್ರಚಾರ ವ್ಯಕ್ತಿ ಕೂಡ ಹೌದು.
ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಕಾರ್ಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅವರನ್ನು UNICEF ಮಕ್ಕಳ ಹಕ್ಕುಗಳ ಸೌಹಾರ್ದ ರಾಯಭಾರಿಯಾಗಿ ನೇಮಿಸಿದೆ. ಈ ಮೂಲಕ 2010ರಲ್ಲಿ ಪರಿಸರ, ಆರೋಗ್ಯ ಮತ್ತು ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ವಿಶೇಷವಾಗಿ ಲಿಂಗ ಸಮಾನತೆ ಮತ್ತು ಲಿಂಗ ಅಸಮಾನತೆಯ ವೇತನ ಪಾವತಿ ಇವುಗಳ ಬಗೆಗೆ ಚರ್ಚಿಸಿದ್ದಾರೆ.