ಮುಂಬೈ: ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಉಪನಗರ ಬಾಂದ್ರಾದಲ್ಲಿರುವ ನಟಿ ಕಂಗನಾ ರನೌತ್ ಕಚೇರಿಯನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೀಲ್ ಮಾಡಿದೆ.
ಕಚೇರಿ ಸೀಲ್ ಮಾಡಿರುವ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಗೆಳೆಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಬುಲ್ಡೋಜರ್ ತಂದು ಕಚೇರಿ ಕೆಡವಿಲ್ಲ, ಬದಲಾಗಿ ಸೀಲ್ ಮಾಡಿದ್ದಾರೆ. ಗೆಳೆಯರೇ ನನಗೆ ತುಂಬಾ ಸಂಕಷ್ಟಗಳು ಎದುರಾಗಬಹುದು. ಆದರೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ನನ್ನೊಂದಿಗಿರಲಿ ಎಂದು ಬರೆದುಕೊಂಡಿದ್ದಾರೆ.
ಕಂಗನಾ ನಿಯಮ ಮೀರಿ ಕಚೇರಿಯನ್ನು ನಿರ್ಮಿಸಿದ್ದಾರೆ ಎಂದು ಸೆಕ್ಷನ್ 354 ರಡಿ ಬಿಎಂಸಿ ಅಧಿಕಾರಿಗಳು ಸೋಮವಾರ ಕಚೇರಿ ಮುಂದೆ ನೋಟಿಸ್ ಅಂಟಿಸಿದ್ದರು. ಅಕ್ರಮ ನಿರ್ಮಾಣವನ್ನು ಕಂಗನಾ ಸ್ವತಃ ನೆಲಸಮ ಮಾಡದಿದ್ದರೆ ನಗರ ಪಾಲಿಕೆಯು ಕಠಿಣ ಕ್ರಮ ಕೈಗೊಳ್ಳಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಸೋಮವಾರ ತಮ್ಮ ಕಚೇರಿ ಆವರಣದಲ್ಲಿ ಬಿಎಂಸಿ ಅಧಿಕಾರಿಗಳು ನೋಟಿಸ್ ಅಂಟಿಸಿದ ವಿಡಿಯೋ ಟ್ವೀಟ್ ಮಾಡಿದ್ದ ಕಂಗನಾ, ತನ್ನ ಕಚೇರಿಯನ್ನು ಕೆಡವಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು ಮತ್ತು ನಾನು ಅಕ್ರವೆಸಗಿರುವುದನ್ನು ಬಿಎಂಸಿ ಅಧಿಕಾರಿಗಳು ತೋರಿಸಬೇಕೆಂದು ಹೇಳಿದ್ದರು.
ನೋಟಿಸ್ ಅಂಟಿಸಿರುವುದು ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ( ಪಿಒಕೆ)ಕ್ಕೆ ಹೋಲಿಸಿ ಕಂಗನಾ ಟ್ವೀಟ್ ಮಾಡಿದ್ದರು. ಇದು ಆಡಳಿತಾರೂಢ ಶಿವಸೇನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಗನಾ ಪರ ವಹಿಸಿ ಮಾತನಾಡುತ್ತಿರುವ ಬಿಜೆಪಿ ವಿರುದ್ಧವೂ ಶಿವಸೇನೆ ನಾಯಕರು ವಾಗ್ವಾಳಿ ನಡೆಸಿದ್ದಾರೆ.