ಪಾಟ್ನಾ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಿಫಾರಸು ಮಾಡಿದ್ದಾರೆ.
ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಇಂದು ಮುಂಬೈ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಇತ್ತ ಬಿಹಾರ ಸಿಎಂ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.
"ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಿಬಿಐ ತನಿಖೆಗೆ ಬಿಹಾರ ಸರ್ಕಾರ ಶಿಫಾರಸು ಮಾಡಿದೆ. ಬಿಹಾರ ಪೊಲೀಸರೇ ಅಪರಾಧಿಗಳನ್ನು ಹಿಡಿಯಬಹುದಾದರೂ ಜನರ ಬೇಡಿಕೆಯ ಮೇರೆಗೆ ಸಿಬಿಐ ತನಿಖೆಗೆ ಪ್ರಕರಣವನ್ನು ಶಿಫಾರಸು ಮಾಡಲಾಗಿದೆ" ಎಂದು ಜೆಡಿಯು ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ.
ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ಇತರ ಸದಸ್ಯರ ವಿರುದ್ಧ ಸುಶಾಂತ್ರ ತಂದೆ ಕೆ.ಕೆ.ಸಿಂಗ್ ಪಾಟ್ನಾದಲ್ಲಿ ದೂರು ದಾಖಲಿಸಿ, ಈ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡುವಂತೆ ಸಿಎಂ ನಿತೀಶ್ ಕುಮಾರ್ ಬಳಿ ಮನವಿ ಮಾಡಿದ್ದರು.
ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ಕೈಗೊಂಡಿರುವ ಮುಂಬೈ ಹಾಗೂ ಬಿಹಾರ ಪೊಲೀಸರು ಈಗಾಗಲೇ ರಿಯಾ ಚಕ್ರವರ್ತಿ ಮತ್ತು ಸುಶಾಂತ್ರ ಗೆಳೆಯ ಸಿದ್ಧಾರ್ಥ್ ಪಿಥಾನಿ ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದಾರೆ.