ಚಿತ್ರರಂಗದಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆಯುತ್ತಲೇ ಇವೆ. ನಿನ್ನೆಯಷ್ಟೇ ಹಿಂದಿ ಕಿರುತೆರೆ ನಟ ಸಮೀರ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಭೋಜ್ಪುರಿ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಭೋಜ್ಪುರಿ ಸಿನಿಮಾ, ಕಿರುತೆರೆ ನಟಿ ಅನುಪಮಾ ಪಾಠಕ್ (40) ಶವ ಆಗಸ್ಟ್ 2 ರಂದು ಮುಂಬೈನ ದಹಿಸರ್ನ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಗೂ ಮುನ್ನ ಅನುಪಮಾ ಫೇಸ್ಬುಕ್ ಲೈವ್ ಮಾಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಹುಟ್ಟಿ , ಬೆಳೆದ ಅನುಪಮಾ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ಬಂದು ನೆಲೆಸಿದ್ದರು. ಅನುಪಮಾ ಬರೆದ ಡೆತ್ನೋಟ್ ಕೂಡಾ ಪೊಲೀಸರಿಗೆ ದೊರೆತಿದೆ ಎನ್ನಲಾಗಿದೆ.
'ನಿಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ, ಯಾರನ್ನೂ ಸುಲಭವಾಗಿ ನಂಬಬೇಡಿ. ಎಲ್ಲರೂ ನಿಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಾರೆ' ಎಂದು ಫೇಸ್ಬುಕ್ ಲೈವ್ನಲ್ಲಿ ಅನುಪಮಾ ಹೇಳಿಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಅನುಪಮಾ ಬರೆದ ಡೆತ್ನೋಟ್ನಲ್ಲಿ ಆತ್ಮಹತ್ಯೆಗೆ ಎರಡು ಕಾರಣಗಳನ್ನು ತಿಳಿಸಿದ್ದಾರೆ.
ಮಲಾದ್ ನಿರ್ಮಾಪಕರೊಬ್ಬರಿಗೆ ನಾನು 10 ಸಾವಿರ ರೂಪಾಯಿ ಹಣ ನೀಡಿದ್ದೆ. ಆದರೆ ಅದನ್ನು ವಾಪಸ್ ನೀಡದೆ ಆತ ಸತಾಯಿಸುತ್ತಿದ್ದರು. ಅಲ್ಲದೆ ನನ್ನ ಸ್ಕೂಟರನ್ನು ಪರಿಚಯಸ್ಥರಿಗೆ ಮಾರಾಟ ಮಾಡಿದ್ದೆ , ಆದರೆ ಅವರೂ ಕೂಡಾ ಬಾಕಿ ಹಣವನ್ನು ನೀಡಿಲ್ಲ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅನುಪಮಾ ಡೆತ್ನೋಟ್ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.