ಈದ್ ಹಬ್ಬದ ನಿಮಿತ್ತ ವಿಶ್ವಾದ್ಯಂತ ತೆರೆಗೆ ಬಂದಿದ್ದ ಸಲ್ಮಾನ್ ಖಾನ್ ನಟನೆಯ ಭಾರತ್ ಸಿನಿಮಾ ಮೊದಲ ದಿನವೇ ದಾಖಲೆಗಳನ್ನು ಧೂಳೀಪಟ ಮಾಡಿ ದೊಡ್ಡ ಕಲೆಕ್ಷನ್ನ ಸೂಚನೆ ನೀಡಿತ್ತು.
ದೇಶಭಕ್ತಿ ಹಾಗೂ ಭಾವನಾತ್ಮಕ ಕಥಾಹಂದರದ ಭಾರತ್ ಸಿನಿಮಾ ಮಂಗಳವಾರ ಕಲೆಕ್ಷನ್ ಮೂಲಕ ಇನ್ನೂರರ ಗಡಿ ದಾಟಿದೆ. ಎರಡನೇ ವಾರದಲ್ಲಿ ಗಳಿಕೆ ಕೊಂಚ ಕಮ್ಮಿಯಾಗಿದ್ದರೂ ಮಂಗಳವಾರ 2.32 ಕೋಟಿ ರೂ. ಕಲೆಕ್ಷನ್ ಮಾಡಿ ಒಟ್ಟಾರೆ 201.86 ಕೋಟಿ ಬಾಚಿಕೊಂಡಿದೆ.
ಭಾರತ್ ಸಿನಿಮಾ ಮೊದಲ ದಿನ 42.30 ಕೋಟಿ ಗಳಿಕೆ ಮಾಡಿ ಈ ವರ್ಷದ ಬಿಗ್ಗೆಸ್ಟ್ ಓಪನರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಲ್ಕು ದಿನದಲ್ಲಿ ನೂರರ ಗಡಿ ದಾಟಿದ್ದ ಭಾರತ್ ಎರಡನೇ ವಾರದಲ್ಲಿ ಇನ್ನೂರು ಕೋಟಿ ಕಲೆಕ್ಷನ್ ಮಾಡಿದೆ.
ಸಲ್ಮಾನ್ ಖಾನ್ ಚಿತ್ರಗಳ ಪೈಕಿ ಮೂರು ಮುನ್ನೂರು ಕೋಟಿ ಗಳಿಕೆ ಮಾಡಿದ್ದರೆ, ಭಾರತ್ ಸೇರಿದಂತೆ ಮೂರು ಸಿನಿಮಾ 200 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ತಾವು ಬಾಕ್ಸಾಫೀಸ್ ಕಿಂಗ್ ಎನ್ನುವುದನ್ನು ಸಲ್ಲು ಮತ್ತೆ ಸಾಬೀತು ಮಾಡಿದ್ದಾರೆ.
ಅಲಿ ಅಬ್ಬಾಸ್ ಜಫರ್ ನಿರ್ದೇಶನದ ಭಾರತ್ ಸಿನಿಮಾದಲ್ಲಿ ಸಲ್ಲೂಗೆ ಜೊತೆಯಾಗಿ ಕತ್ರೀನಾ ಕೈಫ್ ನಟಿಸಿದ್ದಾರೆ. ದಿಶಾ ಪಟಾಣಿ, ಸುನಿಲ್ ಗ್ರೋವರ್, ತಬು, ಕಾಲಿ ಶ್ರಾಫ್ ಹಾಗೂ ಸೋನಾಲಿ ಕುಲಕರ್ಣಿ ಭಾರತ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.