ಆಶಿಕ್ ಬನಾಯಾ...ಆಶಿಕ್ ಬನಾಯಾ...ಅಪನೇ... ಹಾಡು ಯಾರಿಗೆ ತಾನೇ ನೆನಪಿಲ್ಲ..? ಈ ಹಾಡು ನೆನಪಾದೊಡನೆ ಕಣ್ಮುಂದೆ ಬರುವುದು ತನುಶ್ರೀ ದತ್ತಾ ಹಾಗೂ ಹಿಮೇಶ್ ರೇಶಮಿಯಾ. 2005 ರಲ್ಲಿ ಬಿಡುಗಡೆಯಾದ 'ಆಶಿಕ್ ಬನಾಯಾ ಅಪ್ನೇ' ಸಿನಿಮಾದ ಹಾಡು ಇದು. ನಟಿಸಿದ ಮೊದಲ ಚಿತ್ರದಲ್ಲೇ ಮೈ ಚಳಿ ಬಿಟ್ಟು ಬೋಲ್ಡ್ ಆಗಿ ನಟಿಸಿದ್ದ ತನುಶ್ರೀ ದತ್ತಾ ಅವರನ್ನು ಹುಡುಗರಂತೂ ಮರೆಯಲು ಸಾಧ್ಯವೇ ಇಲ್ಲ ಬಿಡಿ.
2010 ರಲ್ಲಿ ಬಿಡುಗಡೆಯಾದ 'ಅಪಾರ್ಟ್ಮೆಂಟ್' ಸಿನಿಮಾ ನಂತರ ತನುಶ್ರೀ ದತ್ತಾ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಮೂರು ವರ್ಷಗಳ ಹಿಂದೆ ದೇಶಾದ್ಯಂತ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದ ಮಿ ಟೂ ಪ್ರಕರಣದಲ್ಲಿ ದನಿಯೆತ್ತಿದ್ದ ತನುಶ್ರೀ ದತ್ತಾ ಇದೀಗ ಬಾಲಿವುಡ್ಗೆ ವಾಪಸಾಗುವ ಮೂಲಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ತನುಶ್ರೀ ತಾವು ಮತ್ತೆ ನಟನೆಗೆ ಬರುತ್ತಿರುವ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ವಿಚಾರ ಮಾತ್ರ ರಿವೀಲ್ ಆಗಿಲ್ಲ. ತೂಕ ಇಳಿಸಿಕೊಳ್ಳಲು ಅವರು ಯೋಗ, ಸೈಕ್ಲಿಂಗ್, ಸ್ವಿಮ್ಮಿಂಗ್ ಸೇರಿ ಇತರ ಫಿಟ್ನೆಸ್ ವರ್ಕೌಟ್ ಮಾಡುತ್ತಿದ್ದಾರೆ. ಜೊತೆಗೆ ಮೆಡಿಟೇಷನ್ ಕೂಡಾ ಮಾಡುತ್ತಿದ್ದಾರಂತೆ. ಅಭಿಮಾನಿಗಳು ಮಾತ್ರ ತನುಶ್ರೀ ದತ್ತಾ ಮತ್ತೆ ನಟಿಸುತ್ತಿದ್ದಾರೆ ಎಂಬ ವಿಚಾರ ತಿಳಿದು ಖುಷಿಯಾಗಿದ್ದಾರೆ.