ಏಳು ದಶಕಗಳಿಂದ ತಮ್ಮ ಸುಮಧುರ ಕಂಠದಿಂದ ನಮ್ಮನ್ನು ರಂಜಿಸಿರುವ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಆದರೆ, 36 ಭಾಷೆಗಳಲ್ಲಿ ಅವರು ಹಾಡಿದ 25,000ಕ್ಕೂ ಹೆಚ್ಚು ಹಾಡುಗಳ ಜೊತೆಗೆ ಅವರು ನಮ್ಮೊಂದಿಗೆ ಎಂದಿಗೂ ಇರುತ್ತಾರೆ. ಸಂಗೀತ ಕ್ಷೇತ್ರಕ್ಕೆ ಅವರ ಅಪ್ರತಿಮ ಕೊಡುಗೆಗಾಗಿ ಹಲವಾರು ಪ್ರಶಸ್ತಿ ಹಾಗೂ ಗೌರವಗಳು ಸಂದಿವೆ.
⦁ ಭಾರತ ಸರ್ಕಾರದ ಪ್ರಶಸ್ತಿಗಳು: ಭಾರತೀಯ ಸಂಗೀತಕ್ಕೆ ಲತಾ ಮಂಗೇಶ್ಕರ್ ಅವರ ಮಹತ್ವದ ಕೊಡುಗೆಯನ್ನು ಗುರುತಿಸಿ, ಭಾರತ ಸರ್ಕಾರವು 1969ರಲ್ಲಿ ಅವರ 'ಪದ್ಮಭೂಷಣ'ವನ್ನು ನೀಡಿ ಗೌರವಿಸಿತು. 1989ರಲ್ಲಿ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ', 1999ರಲ್ಲಿ 'ಪದ್ಮವಿಭೂಷಣ' ಮತ್ತು 2001ರಲ್ಲಿ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಲಾಯಿತು. ಭಾರತದ ಸ್ವಾತಂತ್ರ್ಯದ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 2008ರಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನೂ ನೀಡಲಾಗಿದೆ.
⦁ ಫಿಲ್ಮ್‌ಫೇರ್ ಪ್ರಶಸ್ತಿಗಳು: ಹಿನ್ನಲೆ ಗಾಯನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು ಮೊದಲ ಬಾರಿಗೆ 1959ರಲ್ಲಿ ಪ್ರಾರಂಭವಾಯಿತು. ಲತಾ ಮಂಗೇಶ್ಕರ್ ಅವರು 1959ರಿಂದ 1967ರವರೆಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಗಮನಿಸಬೇಕಾದ ಅಂಶವೆಂದರೆ 1970ರಲ್ಲಿ ಲತಾ ಅವರು ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು. ಬಳಿಕ ಅವರಿಗೆ 1993ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಮತ್ತು 1994 ಮತ್ತು 2004ರಲ್ಲಿ ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.
⦁ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 1972, 1975 ಮತ್ತು 1990ರಲ್ಲಿ ಮೂರು ಚಿತ್ರಗಳ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ (ಮಹಿಳಾ ವಿಭಾಗ) ಲತಾ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಇತಿಹಾಸದ ಪುಟಗಳಲ್ಲಿ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ.
⦁ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು: 1966 ಮತ್ತು 1967ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಗಾನಸುಧೆ ಲತಾ ಮಂಗೇಶ್ಕರ್ ಪಡೆದುಕೊಂಡಿದ್ದರು.