ಹೈದರಾಬಾದ್ (ತೆಲಂಗಾಣ) :ಬಾಲಿವುಡ್ ಲವ್ ಬರ್ಡ್ಸ್ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಮಾಲ್ಡೀವ್ಸ್ನ ರಜೆಯಿಂದ ಹಿಂತಿರುಗಿದ್ದಾರೆ. ಆದರೆ, ಮಾನಸಿಕವಾಗಿ ಇಬ್ಬರೂ ಆ ರಜೆಯಿಂದ ಹೊರ ಬರಲಾರದೇ ಇನ್ನೂ ಅದೇ ಮತ್ತಲ್ಲಿ ತೇಲಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಇಲ್ಲಿದೆ.
ಬಹುದಿನದ ಗೆಳತಿ ಮಲೈಕಾ ಜೊತೆ ಇತ್ತೀಚೆಗೆ ಮಾಲ್ಡೀವ್ಸ್ಗೆ ತೆರಳಿದ್ದ ಅರ್ಜುನ್ ಕಪೂರ್ ಅಲ್ಲಿಯ ಅಂದದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ತಾವು ಮಲೈಕಾಳೊಂದಿಗೆ ಕಳೆದ ರಜೆಯ ದಿನಗಳನ್ನು ಮರೆಯಲಾಗದೇ ಅದೇ ಗುಂಗಿನಲ್ಲಿದ್ದಾರೆ.
ಮಾಲ್ಡೀವ್ಸ್ನ ಸಮುದ್ರದ ದಡದಲ್ಲಿ ಹೃದಯದ ಆಕಾರದಲ್ಲಿ ಸುತ್ತಲೂ ದೀಪಗಳನ್ನು ಜೋಡಿಸಲಾಗಿದೆ. ಆ ಸೊಬಗು ಸವಿಯಲೆಂದು ಮಲೈಕಾ ಅದರತ್ತ ತೆರಳುತ್ತಿದ್ದಾರೆ. ಅದೇ ವಿಡಿಯೋವನ್ನು ಅರ್ಜುನ್ ಇನ್ಸ್ಟಾದಲ್ಲಿ ಹಂಚಿಕೊಂಡು ಮತ್ತೆ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದಾರೆ.
ವಿಡಿಯೋದಲ್ಲಿ ಪಂಜಾಬಿ ಭಾಷೆಯ ಅಂದದ ಹಾಡು ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ. ಮಲೈಕಾ ನಿಯಾನ್ ಹಸಿರು ಗೌನ್ ಧರಿಸಿದ್ದು ಮೇಣದ ಬತ್ತಿಗಳ ಮಧ್ಯದಲ್ಲಿ ಹಾಕಲಾದ ಟೇಬಲ್‌ನತ್ತ ಮಲೈಕಾ ಆಗಮಿಸುತ್ತಿರುವುದನ್ನು ಕಾಣಬಹಬುದು.
ನಗರದ ಜಂಜಾಟದಿಂದ ದೂರವಾಗಿ ಮಾಲ್ಡೀವ್ಸ್‌ನಲ್ಲಿ ಕೆಲವು ದಿನಗಳನ್ನು ಕಳೆದ ನಂತರ ಅರ್ಜುನ್ ಮತ್ತು ಮಲೈಕಾ ಸೋಮವಾರ ಮುಂಬೈಗೆ ಮರಳಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಅಭಿಮಾನಿಗಳು ನೀವು ಬಾಲಿವುಡ್ನ ಮಗದೊಂದು ಅಂದದ ಜೋಡಿ ಎಂದಿದ್ದಾರೆ.